ದಾವಣಗೆರೆ: ಕುರುಬ ಸಮುದಾಯವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಮನವಿ

ದಾವಣಗೆರೆ, ಅ.13: ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಹಾಲುಮತ ಮಹಾಸಭಾದ ಕೇಂದ್ರ, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಮಾಜ ಬಾಂಧವರು ನಗರದಲ್ಲಿ ಶುಕ್ರವಾರ ಬೈಕ್, ಕಾರು ರ್ಯಾಲಿ ನಡೆಸಿದರು.
ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಬಳಿಯಿಂದ ದ್ವಿಚಕ್ರ ವಾಹನ, ಕಾರುಗಳಲ್ಲಿ ಹಳೆ ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿಗೆ ಮಹಾಸಭಾ ನೇತೃತ್ವದ ಸಮಾಜದ ಮುಖಂಡರ ನಿಯೋಗವು ಅಪರ ಡಿಸಿ ಪದ್ಮಾ ಬಸವಂತಪ್ಪ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಿತು.
ಈ ಸಂದರ್ಭ ಮಾತನಾಡಿದ ಮಹಾಸಭಾದ ರಾಜ್ಯ ಸಂಚಾಲಕ ಮಾಯಕೊಂಡ ಎಸ್. ವೆಂಕಟೇಶ್, ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದ್ದು, ಈ ಬೇಡಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದ ಅವರು, ಎಸ್ಟಿ ಮೀಸಲು ಕುರುಬರ ಹಕ್ಕು ಎಂಬ ಉದ್ಘೋಷ ದಿನೇದಿನೇ ವ್ಯಾಪಕವಾಗುತ್ತಿದೆ. ಬುಡಕಟ್ಟು ಮೂಲದ ಕುರುಬರನ್ನು ಪಂಗಡಗಳ ಆದಾರದಲ್ಲಿ ವಿಭಾಗಿಸಿ, ಹಂಚಲ್ಪಟ್ಟ ಮೀಸಲಾತಿಯು ಎಲ್ಲಾ ಪಂಗಡದ ಕುರುಬರಿಗೂ ನ್ಯಾಯ ಸಮ್ಮತವಾಗಿ ದಕ್ಕಬೇಕೆಂಬ ಹಕ್ಕೊತ್ತಾಯ ಎಲ್ಲಾ ದಿಕ್ಕಿನಿಂದಲೂ ಪ್ರತಿಧ್ವನಿಸುತ್ತಿದ್ದು, ಈ ನಿಟ್ಟಿನಲ್ಲಿ ಎಂತಹದ್ದೇ ಹೋರಾಟಕ್ಕೂ ಸಮಾಜ ಸನ್ನದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ, ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷ ಅಶೋಕಕುಮಾರ, ಜಿ.ಟಿ. ಪರಮೇಶ, ಪ್ರಸನ್ನ ಬೆಳಕೆರೆ, ಸಲ್ಲಳ್ಳಿ ಹನುಮಂತಪ್ಪ, ಎಂ. ಮನು, ಆರ್. ಹನುಮಂತಪ್ಪ, ಸಿದ್ದಲಿಂಗಪ್ಪ, ಮಲ್ಲೇಶ್ ಎನ್. ಪೂಜಾರ್, ಗೌಡರ ಚನ್ನಬಸಪ್ಪ ಇದ್ದರು.





