ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ಕೊಡುಗೆ ಅಪಾರ: ಎಚ್.ಡಿ.ದೇವೇಗೌಡ
ಬೆಂಗಳೂರು, ಅ.14: ನಮ್ಮ ಪಕ್ಷದ ಸರಕಾರಗಳು ಅಧಿಕಾರದಲ್ಲಿದ್ದಾಗ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ನೀಡಿವೆ. ಆದುದರಿಂದ, ಮತದಾರರು ರಾಜ್ಯದ ಹಿತದೃಷ್ಟಿ ಮತ್ತು ಸಮಗ್ರ ಅಭಿವೃದ್ಧಿಗಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ಶನಿವಾರ ನಗರದಲ್ಲಿ ಪೀಣ್ಯ ಅಸೋಸಿಯೇಶನ್ ವತಿಯಿಂದ ನಡೆದ ಕೈಗಾರಿಕಾ ಉದ್ಯಮಿಗಳ ಜೊತೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆದಾಗ ಇಲ್ಲಿ ಬಂದ ಸಂದರ್ಭದಲ್ಲಿ ಇಲ್ಲಿಯ ಪರಿಸ್ಥಿತಿ ಸರಿಯಾಗಿ ಇರಲಿಲ್ಲ. ಪೀಣ್ಯ ಕೈಗಾರಿಕಾ ನಗರದಲ್ಲಿ ಮೂಲಭೂತ ಸೌಕರ್ಯಗಳಿರಲಿಲ್ಲ. ಕೇವಲ 5 ತಿಂಗಳಲ್ಲಿ ಇಲ್ಲಿನ ಎಲ್ಲ ರಸ್ತೆಗಳನ್ನು ಉತ್ತಮ ರಸ್ತೆಗಳನ್ನಾಗಿ ಮಾಡಿದ್ದೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೆ ಎಂದರು.
ಕುಮಾರಸ್ವಾಮಿ ಇಲ್ಲಿನ ಲೋಕಸಭಾ ಸದಸ್ಯರಾದಾಗ ಇಲ್ಲಿನ ಕೈಗಾರಿಕೋದ್ಯಮಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟಿದ್ದರು. ನಂತರ ಬಂದ ಸರಕಾರದವರು ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂಬುದು ಬಹಳ ನೋವಿನ ಸಂಗತಿ ಎಂದು ಹೇಳಿದರು.
ಪೀಣ್ಯ ಕೈಗಾರಿಕಾ ಪ್ರದೇಶ ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಪ್ರದೇಶದಲ್ಲೊಂದು. ಆದರೂ ಸರಿಯಾದ ಮೂಲಭೂತ ಸೌಕರ್ಯ ಒದಗಿಸಿರಲಿಲ್ಲ. ನಂತರ 2006 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಕೈಗಾರಿಕೋದ್ಯಮಿಗಳು ಇಲ್ಲಿನ ಸ್ಥಿತಿ ಗತಿ ವಿವರಿಸಿದಾಗ ತಕ್ಷಣ ಸ್ಪಂದಿಸಿ, ಎಲ್ಲ ರಸ್ತೆಗಳನ್ನು ಆಧುನಿಕರಿಸಿ ಕೈಗಾರಿಕಾ ನಗರಗಳಿಗೆ ಎಲ್ಲ ರೀತಿಯ ನೆರವು ನೀಡಿದರು ಎಂದರು.
ಅನೇಕ ಜನರಿಗೆ ಅವರ ಕೈಗಾರಿಕೆಗೆ ಸಂಬಂಧಿಸಿದಂತೆ ಸರಕಾರ ಇವತ್ತು ಅಷ್ಟೊಂದು ಹಣ ನೀಡುತ್ತಿಲ್ಲ. ಹಿಗಾಗಿ ಅನೇಕ ಕೈಗಾರಿಕೆಗಳನ್ನು ಹರಾಜು ಮಾಡುವ ಪ್ರಸಂಗ ಬಂದಿದೆ. ನಾನು ಕೇವಲ 10 ತಿಂಗಳ ಕಾಲ ಪ್ರಧಾನಿ ಆಗಿದ್ದೆ. ಆ ಸಂದಂರ್ಭದಲ್ಲಿ ನಮ್ಮ ಸರಕಾರ ಮಾಡಿದ ಬಜೆಟ್ ಮಂಡನೆ ಒಮ್ಮೆ ಗಮನಿಸಿ ನಾನೂ ಕೈಗಾರಿಕೆಗಳಿಗೆ ಎಷ್ಟು ಬೆಂಬಲ ನೀಡಿದ್ದೆ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ದೇವೇಗೌಡ ಹೇಳಿದರು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೈಗಾರಿಕೆಗಳಿಗೆ ಸ್ಫೂರ್ತಿ ನೀಡುವುದರ ಮೂಲಕ ಸಣ್ಣ ಕೈಗಾರಿಕಾ ಕ್ರಾಂತಿಗೆ ಶಕ್ತಿ ತುಂಬಬೇಕು. ನನ್ನ ಅವಧಿಯಲ್ಲಿ ಡ್ರೈ ಕ್ಲೀನರ್ ಆಗಲಿ ಮೆಕ್ಯಾನಿಕಲ್ ಶಾಪ್ ಆಗಲಿ, ವ್ಯವಸಾಯ ಮಾಡಲು ಮುಂದಾಗಿ ಎಂದು ಅನೇಕ ಜನರಿಗೆ ಹೇಳಿ ನಾನು ಧನ ಸಹಾಯ ಮಾಡಿದ್ದೆ. ಅವರು ಇವತ್ತು ಲಕ್ಷಾಧೀಶರಾಗಿದ್ದಾರೆ ಎಂದು ತಿಳಿಸಿದರು.
ನಾವು ಹಳ್ಳಿಯಿಂದ ಬಂದವರು, ನಮಗೆ ಛಲ ಇರಬೇಕು. ನಾನೂ ಒಬ್ಬ ಹಳ್ಳಿ ಮನುಷ್ಯ, ನನಗೂ ಕಷ್ಟ ಬಂದಿತ್ತು, ಆದ್ರೆ ನಾನು ಇವತ್ತು ಇಲ್ಲಿ ಇರುವುದಕ್ಕೆ ನನ್ನ ಛಲ ಪ್ರೇರೇಪಿಸಿತು. ನಮಗೆ ನಮ್ಮದೆ ಆದ ಗುರಿ ಇರಬೇಕು. ಏನೆ ಆದರೂ ನಾವು ಹಿಂದಕ್ಕೆ ಸರಿಯಬಾರದು. ನಾನು ಇವತ್ತಿಗೂ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತೇನೆ. ಅದಕ್ಕೆ ಕಾರಣ ನನ್ನ ಛಲ ಮತ್ತು ನನ್ನ ಗುರಿ ಎಂದು ಯುವಕರಿಗೆ ಕಿವಿ ಮಾತು ಹೇಳಿದ ಅವರು, ನೀವು ಪ್ರಧಾನಿ ಆಗಿ, ಮುಖ್ಯಮಂತ್ರಿ ಆಗಿ ಏನು ಕೆಲಸ ಮಾಡಿದ್ದಿರಿ ಎಂದು ನನಗೆ ಪ್ರಶ್ನಿಸುತ್ತಾರೆ. ಇವತ್ತು ಜಿಂದಾಲ್‌ನಂತಹ ಕೈಗಾರಿಕೆಗಳನ್ನು ಸೃಷ್ಟಿಸಲು ಯಾರು ಕಾರಣ? ಬೆಂಗಳೂರಲ್ಲಿ ಐಟಿ ಬಿಟಿಗೆ ಉತ್ತೇಜನ ನೀಡಿದ್ದು ಯಾರು ಎಂದರು.
ಕೆಟಿಪಿಎಲ್, ಐಟಿಪಿಎಲ್ ಸ್ಥಾಪನೆ ಮಾಡಿದವರು ಯಾರು ಮತ್ತು ಆ ಕ್ಷೇತ್ರಕ್ಕೆ ರಾಜ್ಯ ಸರಕಾರದ 10 ವರ್ಷ ತೆರಿಗೆ ವಿನಾಯಿತಿ ನೀಡಿದವರು ಯಾರು? ಬೆಂಗಳೂರು ನಗರದಲ್ಲಿ ಮೊದಲ ವರ್ತುಲ ರಸ್ತೆ, ಮೇಲ್ಸೇತುವೆ, ಅಂಡರ್‌ಪಾಸ್‌ಗಳನು ಮಾಡಿದ ಸರಕಾರ ಯಾವುದು ಎಂದು ಪ್ರಶ್ನಿಸಿದರು.
ಬೆಂಗಳೂರು ನಗರಕ್ಕೆ ಕಾವೇರಿ 4 ನೆ ಹಂತ ಮಂಜೂರು ಮಾಡಿ ಕುಡಿಯುವ ನೀರು ತಂದವರು ಯಾರು? ಬೆಂಗಳೂರಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದ ಕೈಗಾರಿಕೋದ್ಯಮ, ವಾಣಿಜ್ಯೋದ್ಯಮ ಮತ್ತು ಐಟಿ ಬಿಟಿಯನ್ನು ನೋಡಿ ಅಂದು ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾಡಿದವರು ಯಾರು ಎಂದು ಕೇಳುವ ಮೂಲಕ ದೇವೇಗೌಡ, ತಮ್ಮ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟರು. ಕುಮಾರಸ್ವಾಮಿ ನೇತೃತ್ವದ ಸರಕಾರವು ಅಧಿಕಾರದಲ್ಲಿದ್ದಾಗ ಬೆಂಗಳೂರು- ನೆಲಮಂಗಲ, ಬೆಂಗಳೂರು-ಇಲೆಕ್ಟ್ರಾನಿಕ್ ಸಿಟಿ, ಬೆಂಗಳೂರು-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೂರು ಎಲಿವೇಟೆಡ್ ರಸ್ತೆಗಳನ್ನು ನಿರ್ಮಿಸಿತ್ತು ಎಂದು ಅವರು ಹೇಳಿದರು.







