ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದಲ್ಲಿ ಆರೆಸೆಸ್ಸ್ ಮಾಜಿ ಪ್ರಚಾರಕನಿಂದ ದೂರು
ಬಿ.ವೈ.ರಾಘವೇಂದ್ರ ಒಡೆತನದ ಶಿಕ್ಷಣ ಸಂಸ್ಥೆಯಿಂದ ಕೆರೆ ಭೂಮಿ ಒತ್ತುವರಿ

ಬೆಂಗಳೂರು, ಅ. 14: ‘ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಪುತ್ರ ಶಾಸಕ ಬಿ.ವೈ.ರಾಘವೇಂದ್ರ ಒಡೆತನದ ಶಿಕ್ಷಣ ಸಂಸ್ಥೆ ಕೆರೆ ಭೂಮಿ ಒತ್ತುವರಿ ಮಾಡಿದ್ದು, ಕೂಡಲೇ ತೆರವು ಮಾಡಬೇಕು’ ಎಂದು ಕೋರಿ ಆರೆಸ್ಸೆಸ್ ಮಾಜಿ ಪ್ರಚಾರಕ ಎನ್.ಹನುಮೇಗೌಡ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಶನಿವಾರ ಸಂಜೆ 4:35ರ ಸುಮಾರಿಗೆ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಕೆರೆ ಭೂಮಿ ಒತ್ತುವರಿಯ ಬಗ್ಗೆ ಕೂಡಲೇ ತಹಶೀಲ್ದಾರರಿಂದ ವರದಿ ಪಡೆದು ಒತ್ತುವರಿ ಮಾಡಿರುವ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು, ರೈತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿ ನಂದಿಹಳ್ಳಿ ಗ್ರಾಮದ ಸರ್ವೇ ನಂ.31ರಲ್ಲಿ ಕೆರೆ ಇದ್ದು ‘ದೊಡ್ಡಕೆರೆ’ ಎಂದು ಸರಕಾರಿ ದಾಖಲೆಗಳಲ್ಲಿ ದಾಖಲಾಗಿದೆ. ಆದರೆ, ಇದೇ ನಂದಿಹಳ್ಳಿ ಗ್ರಾಮದ ಕೆರೆ ಪಕ್ಕದ ಸರ್ವೇ ನಂ.38ರಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯ ಎಂಬ ಕಾಲೇಜು ನಡೆಸುತ್ತಿದೆ. ಈ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ, ಶಾಸಕ ಬಿ.ವೈ.ರಾಘವೇಂದ್ರ, ಅಧ್ಯಕ್ಷ ಬಿ.ಶಿವಕುಮಾರ್, ಕಾರ್ಯದರ್ಶಿ ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ, ಬಿ.ವೈ.ವಿಜಯೇಂದ್ರ ಖಜಾಂಚಿಗಳಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆರೆಯ ಪಕ್ಕದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಐದಾರು ಎಕರೆ ಕೆರೆಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅದರಲ್ಲಿ ಆಟದ ಮೈದಾನ ನಿರ್ಮಿಸಿದ್ದು, ತಂತಿ ಬೇಲಿ ಹಾಕಿದ್ದರಿಂದ ಕೆರೆಯ ವಿಸ್ತೀರ್ಣ ಕಡಿಮೆಯಾಗಿದೆ. ಅಲ್ಲದೆ, ಕೆರೆಯಲ್ಲಿ ನೀರು ನಿಲ್ಲುವುದು ಕಡಿಮೆಯಾಗಿದೆ ಎಂದು ಹನುಮೇಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಕೆರೆ ಭೂಮಿ ಒತ್ತುವರಿಗೆ ನಕ್ಷೆ ಸಹಿತ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರುವ ಎನ್.ಹನುಮೇಗೌಡ ನಂದಿಹಳ್ಳಿ ಗ್ರಾಮದ ಸರ್ವೇ ನಂ.31ರಲ್ಲಿನ 25 ಎಕರೆ 27 ಗುಂಟೆ ಕೆರೆ ಜಮೀನಿನ ಪೈಕಿ ಐದಾರು ಎಕರೆ ಒತ್ತುವರಿಯಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ಶಾಸಕ ಬಿ.ವೈ.ರಾಘವೇಂದ್ರ ಒಡೆತನದ ಶಿಕ್ಷಣ ಸಂಸ್ಥೆ ಕೆರೆ ಭೂಮಿ ಒತ್ತುವರಿ ಮಾಡಿದ್ದು, ತಹಶಿಲ್ದಾರರಿಂದ ಕೂಡಲೇ ವರದಿ ಪಡೆದು ಒತ್ತುವರಿ ತೆರವು ಮಾಡಬೇಕು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
-ಎನ್.ಹನುಮೇಗೌ ,ಆರೆಸ್ಸೆಸ್ ಮಾಜಿ ಪ್ರಚಾರಕ, ದೂರದಾರ







