ಮಳೆ ಭೀತಿಯಲ್ಲಿ ಬೆಂಗಳೂರು ಜನತೆ

ಬೆಂಗಳೂರು, ಅ.14: ನಗರದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ಮೇಲೆ ಮಳೆ ನೀರು ಹೊಳೆಯಂತೆ ಹರಿಯುತ್ತಿದ್ದು, ಜನತೆ ಮನೆಯಿಂದ ಹೊರಕ್ಕೆ ಬರಲು ಹೆದರುತ್ತಿದ್ದಾರೆ.
ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಮೂರು ಮಂದಿ ಮೋರಿಯಲ್ಲಿ ಕೊಚ್ಚಿಕೊಂಡು ಹೋದರೆ, ಇಬ್ಬರು ಗೋಡೆ ಕುಸಿತಕ್ಕೆ ಬಲಿಯಾಗಿದ್ದಾರೆ. ಇನ್ನು ಹಲವು ಮಂದಿ ಮಳೆಯ ನಡುವೆ ಮನೆ ತಲುಪುವ ಮಾರ್ಗದಲ್ಲಿ ಅಪಾಯದಿಂದ ಕೂದಲೆಳೆಯಲ್ಲಿ ಪಾರಾಗಿ ಮನೆ ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆಯೇ ಶಾಪವಾಗಿದೆ: ಕಳೆದ ಒಂದು ತಿಂಗಳಿನಿಂದ ನಗರದ ಜನತೆಗೆ ಮಳೆಯೇ ಶಾಪವಾಗಿದೆ. ಹೊಟ್ಟೆ ಪಾಡಿಗಾಗಿ ದಿನಗೂಲಿ ಮಾಡುವ ಜನತೆ ಮಳೆಯ ನಡುವೆಯೇ ಕೆಲಸ ಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ. ತಗ್ಗು ಪ್ರದೇಶಗಳಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿರುವವರ ಮನೆಗಳಿಗೆ ನೀರು ನುಗ್ಗಿದ್ದು, ಅಡುಗೆ ಮಾಡಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬೀದಿ ವ್ಯಾಪಾರಿಗಳ ಗೋಳು: ದಿನ ನಿತ್ಯದ ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿರುವ ಬೀದಿ ವ್ಯಾಪಾರಿಗಳಿಗೆ ಬೆಂಗಳೂರಿನ ಮಳೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಕಳೆದ 15ದಿನದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ ವ್ಯಾಪಾರವನ್ನು ಕಸಿದುಕೊಂಡಿದೆ ಎಂದು ಬೀದಿ ಬದಿಯ ವ್ಯಾಪಾರಿಗಳು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ.
ಈ ಕುರಿತು ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುವ ಗೌರಮ್ಮ, ಕಳೆದ ಒಂದು ತಿಂಗಳಿಂದ ವ್ಯಾಪಾರ ಮಾಡಲು ಭಯವಾಗುತ್ತದೆ. ಬದುಕು ನಡೆಸಬೇಕಲ್ಲ ಎಂದು ವ್ಯಾಪಾರಕ್ಕೆ ಬಂದರೆ ರಸ್ತೆಯ ಮೇಲೆ ಹರಿಯುವ ನೀರಿನ ರಭಸ ನೋಡಿದರೆ ಹೆಜ್ಜೆ ಇಡಲು ಹೆದರಿಕೆಯಾಗುತ್ತದೆ. ಹೀಗಾಗಿ ಕಳೆದ ಒಂದು ತಿಂಗಳಿಂದ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಮೆಟ್ರೋವನ್ನ ಅಪ್ಪಿಕೊಂಡ ಪ್ರಯಾಣಿಕರು:ನಗರದಲ್ಲಿ ಸುರಿಯುತ್ತಿರುವ ಮಳೆಯ ರಭಸ ನೋಡಿದರೆ ಪ್ರಯಾಣಿಕರು ಸುರಕ್ಷಿತವಾಗಿ ಮನೆ ತಲುಪುವುದೇ ದುಸ್ಸಾಧ್ಯವಾಗಿದೆ. ಬಿಎಂಟಿಸಿ ಬಸ್‌ಗಳೇ ರಸ್ತೆಗಳಲ್ಲಿ ಮುಳುಗುತ್ತಿರುವಾಗ ಇನ್ನು ಬೈಕ್ ಸವಾರರು, ಕಾರಿನಲ್ಲಿ ಪ್ರಯಾಣಿಸುವವರು ಸುರಕ್ಷತೆಯ ಕುರಿತು ಆತಂಕ ಮೂಡುವಂತಾಗಿದೆ.
ನಗರದ ಯಾವ ರಸ್ತೆಗಳು ಸುರಕ್ಷಿತವಲ್ಲ ಎಂಬ ಅಭಿಪ್ರಾಯಕ್ಕೆ ಪ್ರಯಾಣಿಕರು ಬಂದಿದ್ದಾರೆ. ಹೀಗಾಗಿ ಪ್ರಯಾಣಿಕರು ಬಸ್‌ಗಳಲ್ಲೂ ಪ್ರಯಾಣಿಸದೆ, ಕಾರು ಹಾಗೂ ಬೈಕನ್ನು ಬಳಸದೆ ಮೆಟ್ರೋ ರೈಲಿನತ್ತ ಧಾವಿಸಿದ್ದಾರೆ. ಐದು ನಿಮಿಷಕ್ಕೊಂದು ಸಂಚರಿಸುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಇನ್ನೂ ಎರಡು-ಮೂರು ದಿನ ಸುರಿಯುವ ಸಾಧ್ಯತೆಯಿದೆ. ಹೀಗಾಗಿ ನಗರದ ಜನತೆ ರಸ್ತೆ ಹಾಗೂ ಫುಟ್ ಪಾತ್‌ನಲ್ಲಿ ಸಂಚರಿಸುವಾಗ ಅತ್ಯಂತ ಜಾಗ್ರತೆಯಿಂದ ನಡೆಯಬೇಕಾಗಿದೆ. ಮಳೆಯ ರಕ್ಷಣೆಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸುವ ಮೂಲಕ ಅಪಾಯದಿಂದ ಪಾರಾಗಬೇಕಾಗಿದೆ.







