ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಏಕಿಲ್ಲ: ಕುಮಾರಸ್ವಾಮಿ
ಬೆಂಗಳೂರು, ಅ. 14: ‘ನನ್ನ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿದ ಔದಾರ್ಯವನ್ನು ಮಳೆ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಜನತೆ ಸಮಸ್ಯೆ ಪರಿಹರಿಸುವಲ್ಲಿಯೂ ತೋರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟ್ವೀಟರ್ ಮೂಲಕ ಮನವಿ ಮಾಡಿದ್ದಾರೆ.
ಸತತ ಮಳೆಯಿಂದ ಬೆಂಗಳೂರಿನ ನಾಗರಿಕರಿಗೆ ಆಗುತ್ತಿರುವ ಅನಾಹುತಗಳಿಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲು ಇದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹಣದ ದಾಹದಲ್ಲಿ ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಪಾಪಪ್ರಜ್ಞೆ ಇದ್ದರೆ ಹಾಗೂ ನಿಮ್ಮ ಕುಟುಂಬದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಅದರ ನೋವು ಏನು ಅನ್ನುವುದನ್ನು ಯೋಚನೆ ಮಾಡಲಿ. ಎಲ್ಲಿ ತಪ್ಪು ಮಾಡುತ್ತಿದ್ದೀರಿ, ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತೀರಿ ಎಂಬ ಬಗ್ಗೆ ಚಿಂತನೆ ಮಾಡುವುದು ಸೂಕ್ತ. ಬೆಂಗಳೂರು ಅಭಿವೃದ್ಧಿಗೆ ಸಹಸ್ರಾರು ಕೋಟಿ ರೂ.ವೆಚ್ಚ ಮಾಡಲಾಗಿದೆ. ಆದರೂ, ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಲೋಪಕ್ಕೆ ಕಾರಣರಾದ ಒಬ್ಬ ಅಧಿಕಾರಿಯ ಮೇಲೆಯೂ ಕ್ರಮ ಕೈಗೊಂಡಿಲ್ಲವೇಕೇ ಎಂದು ಕುಮಾರಸ್ವಾಮಿ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.







