ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ
ಮಂಗಳೂರು, ಅ. 14: ಕರಾವಳಿ ನಿಯಂತ್ರಣ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ 20 ಮರಳು ದಿಬ್ಬಗಳಲ್ಲಿ ಮರಳನ್ನು ಮಾನವ ಶ್ರಮದ ಮೂಲಕ ತೆಗೆಯಲು ಪರವಾನಿಗೆ ನೀಡುವ ಬಗ್ಗೆ ಸಾಂಪ್ರದಾಯಿಕವಾಗಿ ಈ ಹಿಂದಿನಿಂದಲೂ ಮರಳು ತೆಗೆಯುತ್ತಿದ್ದವರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮೊದಲನೆ ಹಂತದಲ್ಲಿ ಈಗಾಗಲೇ 41 ಅರ್ಜಿದಾರರಿಗೆ ಮರಳು ದಿಬ್ಬಗಳಲ್ಲಿ ಮರಳನ್ನು ಮಾನವ ಶ್ರಮ ಮೂಲಕ ತೆಗೆಯಲು ತಾತ್ಕಾಲಿಕ ಪರವಾನಿಗೆಯನ್ನು ನೀಡಲಾಗಿದೆ.
ಆದ್ದರಿಂದ ಮರಳು ಪೂರೈಕೆಯಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಮರಳು ತೆಗೆಯುತ್ತಿದ್ದ ಬಗ್ಗೆ ಪೂರಕ ದಾಖಲೆಗಳನ್ನು ಸಲ್ಲಿಸದೆ ಇರುವ ಅರ್ಜಿದಾರರಿಗೆ ಸೆ.14ರಿಂದ ಸೆ. 24ರವರೆಗೆ ಪೂರಕ ದಾಖಲೆ ಸಲ್ಲಿಕೆಗೆ ಕಾಲಾವಕಾಶ ನೀಡಿದ ಬಳಿಕ 2 ವರ್ಷ ಹಾಗೂ 3 ವರ್ಷಕ್ಕೂ ಮೇಲ್ಪಟ್ಟು ದಾಖಲೆಗಳನ್ನು ಸಲ್ಲಿಸಿರುವ ಅರ್ಜಿದಾರರಿಗೆ ಮರಳು ದಿಬ್ಬಗಳಿಂದ ಮರಳು ತೆಗೆಯಲು ಪರವಾನಿಗೆ ನೀಡುವ ಬಗ್ಗೆ ಸ್ಥಳ ಪರಿಶೀಲನೆಯ ಹಂತದಲ್ಲಿದೆ. ಈ ಬಗ್ಗೆ ಶೀಘ್ರವಾಗಿ ಇತ್ಯರ್ಥ ಪಡಿಸುವುದಾಗಿ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಪ್ರಕಟನೆ ತಿಳಿಸಿದೆ.
ಸಿಆರ್‌ಝಡ್ ವ್ಯಾಪ್ತಿಗೊಳಪಡದ ನದಿ ಪಾತ್ರದಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ ಮರಳು ಗಣಿಗಾರಿಕೆಗೆ ಅವಕಾಶ ನೀಡುವ ಕುರಿತು ಮತ್ತು ಸಾಂಪ್ರದಾಯಿಕವಾಗಿ ಮರಳು ತೆಗೆಯುವ ಸಮುದಾಯಗಳನ್ನು ಗುರುತಿಸುವ ಕುರಿತು ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಂತೆ ಶೀಘ್ರವಾಗಿ ಕ್ರಮ ವಹಿಸುವುದಾಗಿ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





