ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ದೂರು
ಪುತ್ತೂರು, ಅ. 14: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಶಬ್ದ ಪ್ರಯೋಗ ಮಾಡಿದ್ದಾರೆ ಎಂದು ಆಪಾದಿಸಿ ರಾಜ್ಯದ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ವಿರುದ್ಧ ಪುತ್ತೂರು ಬಿಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್ ಅವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿದ ನಿಯೋಗ ಲಿಖಿತ ದೂರು ಸಲ್ಲಿಸಿತು.
ಅ.13ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಕೀಳು ಮಟ್ಟದ ಶಬ್ದಗಳನ್ನು ಪ್ರಯೋಗಿಸಿ ಮಾತನಾಡಿರುವುದು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಮಾಧ್ಯಮಗಳ ಮೂಲಕ ನಮಗೆ ತಿಳಿದು ಬಂದಿದೆ. ಈ ರೀತಿಯ ಹೇಳಿಕೆಯಿಂದ ನಮ್ಮ ಮನಸ್ಸಿಗೆ ನೋವಾಗಿರುತ್ತದೆ. ಆದ್ದರಿಂದ ಸಚಿವ ರೋಷನ್ ಬೇಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶಂಭು ಭಟ್, ಕೇಶವ ಗೌಡ ಬಜತ್ತೂರು, ಉಪಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗೌರಿ ಬನ್ನೂರು, ರಾಮದಾಸ್ ಹಾರಾಡಿ, ರಾಜ್ಯ ಯುವ ಮೊರ್ಚಾದ ಉಪಾಧ್ಯಕ್ಷ ಶಿವರಂಜನ್, ಮಾಜಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಪುತ್ತೂರು ಕ್ಷೇತ್ರದ ಉಸ್ತುವಾರಿ ಕಡಬ ಕೃಷ್ಣ ಶೆಟ್ಟಿ, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಗೌರಿ, ಪ್ರಧಾನ ಕಾರ್ಯದರ್ಶಿ ಜಯಶ್ರೀ, ಯುವ ಮೋರ್ಚಾ ಗ್ರಾಮಾಂತರ ಮಂಡಲದ ಅಧ್ಯಕ್ಷ ಸುನಿಲ್ ದಡ್ಡು, ಕಾರ್ಯದರ್ಶಿ ಸಂತೋಷ್, ನಗರ ಯುವ ಮೋರ್ಚಾ ಅಧ್ಯಕ್ಷ ಅನೀಶ್ ಬಡೆಕ್ಕಿಲ, ನಗರ ಹಿಂದುಳಿದ ಮೋರ್ಚಾದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮತ್ತಿತರರು ಉಪಸ್ಥಿತರಿದ್ದರು.