ವೇಶ್ಯಾವಾಟಿಕೆ ಆರೋಪ: ನಾಲ್ವರ ಬಂಧನ; ಸೊತ್ತು ವಶ
ಮಂಗಳೂರು, ಅ. 14: ನಗರದ ಕರಂಗಲ್ಪಾಡಿಯ ಅಪಾರ್ಟ್‌ಮೆಂಟ್‌ಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಕಾವಳಪಡೂರು ಗ್ರಾಮದ ವಗ್ಗ ಮಂಘಾಜೆ ಮನೆ ಸಂತೋಷ್ ಕುಮಾರ್ (32), ಬಿಜೈ ಕಾಪಿಕಾಡ್ ಬಾಳೆಬೈಲು ರಸ್ತೆ ನಿವಾಸಿ ದೀಪಕ್ (26), ತೊಕ್ಕೊಟ್ಟು ಪೆರ್ಮನ್ನೂರು ಬಬ್ಬುಕಟ್ಟೆ ನಿವಾಸಿ ನವೀನ್ (40), ಪಿಂಪ್ ದಾವಣಗೆರೆ ನಿವಾಸಿ ಆಶಾ ಜಿ. (23) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 31,500 ರೂ., 7 ಮೊಬೈಲ್ ಫೋನ್, 2 ಬೈಕ್ ಸೇರಿದಂತೆ ಒಟ್ಟು 2,06,100 ರೂ. ವೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಶಾ ಎಂಬಾಕೆಯು ಅಪಾರ್ಟ್‌ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಇಟ್ಟುಕೊಂಡು ಸಂತೊಷ್ ಎಂಬಾತನ ಸಹಾಯ ದೊಂದಿಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ. ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







