ಚಾಮರಾಜನಗರ: ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕನಿಗೆ ಸನ್ಮಾನ

ಚಾಮರಾಜನಗರ, ಅ.13: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಹಿಮವದ್ ಗೋಪಾಲಸ್ವಾಮಿ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಳೆಯಿಂದಾಗಿ ರಸ್ತೆಯ ಜೆಲ್ಲಿ ಕಲ್ಲು ಎದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಮರಿಗೆ ಬೀಳುವುದನ್ನು ಬಹಳ ಸಮಯ ಪ್ರಜ್ಞೆಯಿಂದ ತಪ್ಪಿಸಿ, ತಡೆಗೋಡೆಗೆ ನಿಧಾನವಾಗಿ ನಿಲ್ಲಿಸಿದ ಪರಿಣಾಮ ಅನೇಕರ ಪ್ರಾಣ ಉಳಿಸಿದ ಕೀರ್ತಿ ಚಾಲಕ ಚಿನ್ನಸ್ವಾಮಿ ಅವರಿಗೆ ಸಲ್ಲುತ್ತದೆ. ಅವರ ಸಾಧನೆ ಸಾರಿಗೆ ನಿಗಮಕ್ಕೆ ಹೆಚ್ಚಿನ ಗೌರವವನ್ನು ತಂದು ಕೊಟ್ಟಿದೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆಶೋಕ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಬರುತ್ತಿದ್ದ ಸಾರಿಗೆ ಬಸ್ ಅವಘಡವನ್ನು ಜಾಣಕ್ಷತನದಿಂದ ತಪ್ಪಿಸಿದ ಬಸ್ಸಿನ ಚಾಲಕ ಚಿನ್ನಸ್ವಾಮಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಸಾರಿಗೆ ನಿಗಮದ ಚಾಲಕ ಚಿನ್ನಸ್ವಾಮಿ ಅವರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದಾಗಿ ಬಸ್ ಕಮರಿಗೆ ಉರುಳುವುದು ತಪ್ಪಿದೆ. ಇಂಥ ಕಾರ್ಯ ಮಾಡಿ ನಿಗಮದ ಘನತೆಯನ್ನು ಕಾಪಾಡುವ ಜೊತೆಗೆ ದೊಡ್ಡ ಗಂಡಾಂತರಿಂದ ಪಾರು ಮಾಡುತ್ತಿದ್ದಾರೆ. ಇಳಿಜಾರಿರುವ ರಸ್ತೆಯಲ್ಲಿ ಬಸ್ ಅನ್ನು ನಿಧಾನವಾಗಿ ಚಲಿಸುವಂತೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಇದನ್ನು ಸಮರ್ಥವಾಗಿ ಚಾಲಕ ಚಿನ್ನಸ್ವಾಮಿ ನಿಭಾಯಿಸಿದ್ದಾರೆ. ಹೀಗಾಗಿ ಅವರಿಗೆ ವಿಭಾಗದಿಂದ ನಗದು, ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರವನ್ನು ನೀಡಿ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಅಭಿನಂದನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಈಗಾಗಲೇ ರಸ್ತೆಯನ್ನು ದುರಸ್ತಿಪಡಿಸಿಕೊಡುವಂತೆ ಅರಣ್ಯ ಇಲಾಖೆ, ಲೋಕೊಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಾ. ಗೀತಾ ಮಹದೇವಪ್ರಸಾದ್ ಅವರಿಗೂ ಮನವಿ ಸಲ್ಲಿಸಿ, ರಸ್ತೆಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ತಕ್ಷಣದಲ್ಲಿಯೇ ರಸ್ತೆಯನ್ನು ಅಭಿವೃದ್ದಿಪಡಿಸುವ ಭರವಸೆಯನ್ನು ನೀಡಿದ್ದಾರೆ. ಬೆಟ್ಟದ ಕಿರಿದಾದ ಇಳಿಜಾರಿನಲ್ಲಿ ರಸ್ತೆಯ ತುಂಬೆಲ್ಲ ಸಣ್ಣ ಸಣ್ಣ ಗುಂಡಿ ಹಾಗೂ ಜೆಲ್ಲಿಕಲ್ಲು ಎದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಿಳಿಸಿದರು.
ಚಾಲಕ ಚಿನ್ನಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಸ್ ಸುಸಜ್ಜಿತವಾಗಿತ್ತು. ಬೆಟ್ಟದ ಮೇಲಕ್ಕೆ ಹೋದ ಬಳಿಕ ವಾಪಸ್ ಬರುವಾಗ ಇಳಿಜಾರಿನ ರಸ್ತೆಯಲ್ಲಿ ಬಸ್ ಚಲಿಸುತ್ತಿದ್ದಾಗಲೇ ನಿಯಂತ್ರಣ ತಪ್ಪಿತ್ತು. ಬ್ರೇಕ್ ಹಾಕಿದರು ಸಹ ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ. ಅದರೂ ಬಹಳ ಪ್ರಯಾಸ ಪಟ್ಟು ನಿಧಾನವಾಗಿ ಬಸ್ ಅನ್ನು ತಡೆಗೋಡೆವರೆಗೆ ತಂದು ನಿಲ್ಲಿಸಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿ ಮಲ್ಲೇಶ್, ಗುಂಡ್ಲುಪೇಟೆ ಡಿಫೋ ಮ್ಯಾನೇಜರ್ ಜಯಕುಮಾರ್, ಚಾ.ನಗರ ಡಿಪೋದ ಮಂಜುನಾಥ್, ಮಲ್ಲೇಶ್,ಕೊಳ್ಳೇಗಾಲದ ಸುಬ್ಯಮಣ್ಯ, ನಂಜನಗೂಡಿನ ಮಹದೇವಸ್ವಾಮಿ, ಶಿಲ್ಪಿ ಮೊದಲಾಧವರು ಇದ್ದರು.







