ಬಾರ್ ತೆರವುಗೊಳಿಸುವಂತೆ ಒತ್ತಾಯಿಸಿ ಧರಣಿ

ಮೈಸೂರು, ಅ.14: ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿನ ಆರ್ಯ ಬೇಕರಿ ಪಕ್ಕದಲ್ಲಿ ಇದ್ದಕ್ಕಿದ್ದಂತೆ ಅ.13 ರಂದು ಬಾರ್ ತೆಗೆದಿರುವುವನ್ನು ಮುಚ್ಚಿಸಬೇಕೆಂದು ವಿರೋಧ ಪಕ್ಷದ ನಾಯಕ, ನಗರಪಾಲಿಕೆ ಸದಸ್ಯ ಕೆ.ಸಿ.ಶೌಕತ್ ಪಾಷ ಅವರ ನೇತೃತ್ವದಲ್ಲಿ ಸಾರ್ವಜನಿಕರು ಶನಿವಾರ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಧರಣಿ ನಡೆಸಿದರು.
ಡಾ.ರಾಜ್ ಕುಮಾರ್ ರಸ್ತೆ ಸುತ್ತಮುತ್ತ ದೇವಾಲಯ, ಮಸೀದಿ, ಶಾಲಾ-ಕಾಲೇಜುಗಳು, ಉದ್ಯಾನವನಗಳು ಇದ್ದು ಇಂತಹ ಸ್ಥಳದಲ್ಲಿ ಬಾರ್ ತೆರೆದಿರುವುದರಿಂದ ಮಹಿಳೆಯರು, ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಇದೀಗ ಹೊಸದಾಗಿ ತೆರೆದಿರುವ ಬಾರ್ ವಾರ್ಡ್ ನಂ.55 ರ ವ್ಯಾಪ್ತಿಗೆ ಬರುತ್ತದೆ. ಈ ಭಾಗ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ಸ್ಥಳದಲ್ಲಿ ಬಾರ್ ತೆಗೆದಿರುವುದು ಮುಂದಿನ ದಿನಗಳಲ್ಲಿ ಗಲಾಟೆ ಗದ್ದಲಗಳಿಗೆ ಎಡೆ ಮಾಡಿಕೊಡಬಹುದು. ಈಗಾಗಲೇ ಕ್ಯಾತಮಾರನಹಳ್ಳಿ ಟೆಂಟ್ ಬಳಿ ತೆಗೆದಿರುವ ಬಾರ್ ಗಳಿಂದ ಆಗುತ್ತಿರುವ ತೊಂದರೆಗಳಿಂದ ಆ ಪ್ರದೇಶ ಬಂದೋಬಸ್ತ್ ನಲ್ಲಿರುವಂತಾಗಿದೆ. ಅದರಂತೆಯೇ ಈ ಪ್ರದೇಶವು ಆಗಬಾರದು. ಹೀಗಾಗಿ ಈ ಬಾರ್ ಅನ್ನು ಮುಚ್ಚಬೇಕೆಂದು ಆಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉದಯಗಿರಿ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸಂತೋಷ್, ಪ್ರೇಮ ಅವರು ಪ್ರತಿಭಟನಕಾರರೊಂದಿಗೆ ಮಾತನಾಡಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿ ಕ್ರಮ ಕೈಗೊಳ್ಳಲಾಗುವುದು. ಈಗ ಪ್ರತಿಭಟನೆ ವಾಪಾಸ್ ಪಡೆಯಿರಿ ಎಂದು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನ ಪಟ್ಟರು.
ಧರಣಿಯಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ಎಂ.ನಟರಾಜ್, ಅಯೂಬ್ ಖಾನ್, ಅಯಾಜ್ ಪಾಷ, ರಜನಿ ಅಣ್ಣಯ್ಯ, ಅಕ್ರಂ ಪಾಷ, ಎಸ್ ಡಿಪಿಐ ಮಜೀದ್ ವಾಯಿದ್, ಮುಖಂಡರಾದ ಗಿರಿಧರ್ ಇತರರು ಉಪಸ್ಥಿತರಿದ್ದರು.







