ಮೈಸೂರು: ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಮೈಸೂರು, ಅ.14:- ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅಸಭ್ಯ ಪದ ಬಳಕೆ ಹಿನ್ನೆಲೆಯಲ್ಲಿ ರೋಷನ್ ಬೇಗ್ ವಿರುದ್ಧ ಮೈಸೂರು ಭಾರತೀಯ ಜನತಾಪಕ್ಷದ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ಪ್ರತಿಮೆ ವೃತ್ತದ ಬಳಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು ರೋಷನ್ ಎಂಬ ಕತ್ತೆಗೇನು ಗೊತ್ತು ಕಸ್ತೂರಿಯ ಬೆಲೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕತ್ತೆಯ ಕತ್ತಿಗೆ ನಾಮಫಲಕ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸಚಿವ ರೋಷನ್ ಬೇಗ್ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ರೋಷನ್ ಬೇಗ್ ಕ್ಷಮೆ ಯಾಚಿಸಬೇಕು. ರೋಷನ್ ಬೇಗ್ ರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿದರು.
ಬಳಿಕ ಮಾತನಾಡಿದ ಪ್ರತಿಭಟನಾಕಾರರು, ಸಚಿವ ರೋಷನ್ ಬೇಗ್ ಪ್ರಧಾನ ಮಂತ್ರಿಯವರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಮಾಡಿರುವ ಟೀಕೆಯು ಭಾರತಕ್ಕೆ ಮಾಡಿರುವ ಅವಮಾನವಾಗಿದೆ. ಅಷ್ಟೇ ಅಲ್ಲದೇ ಪ್ರಧಾನಮಂತ್ರಿಗಳು ಪ್ರತಿನಿಧಿಸುವ 125ಕೋಟಿ ಜನರಿಗೆ ಮಾಡಿರುವ ಅವಮಾನವಾಗಿದೆ. ಇಂತಹ ಮಂತ್ರಿಯನ್ನು ಮುಖ್ಯಮಂತ್ರಿಗಳು ಒಂದೇ ಒಂದು ಕ್ಷಣವೂ ಸಚಿವ ಸಂಪುಟದಲ್ಲಿ ಮುಂದುವರಿಸಬಾರದು. ತಕ್ಷಣವೇ ಅವರನ್ನು ವಜಾಗೊಳಿಸಬೇಕುಂದು ಆಗ್ರಹಿಸಿದರು.
ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಸಂಪತ್, ರಾಜೇಶ್, ಸೋಮರಾಜ್ ಅರಸ್, ಸೋಮಶೇಖರ್, ಮಹೇಶ್ ರಾಜ್ ಅರಸ್, ಸೋಮೇಶ್, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







