ಕಿಡ್ನಿ ದಾನ ಮಾಡುವಂತೆ ಉತ್ತರಾಖಂಡದ ಸಚಿವರ ಪತಿ ಆಮಿಷ ಒಡ್ಡಿದ್ದರು: ಆರೋಪ

ಡೆಹ್ರಾಡೂನ್, ಅ. 14: ಉತ್ತರಾಖಂಡದ ಸಚಿವೆ ರೇಖಾ ಆರ್ಯಾ ಅವರ ಪತಿ ಗಿರಿಧರಲಾಲ್ ಶಾಹು ತನ್ನ ಅನಾರೋಗ್ಯ ಪೀಡಿತ ಎರಡನೆ ಪತ್ನಿಗೆ ಕಿಡ್ನಿ ದಾನ ನೀಡುವಂತೆ ಆಮಿಷ ಒಡ್ಡಿದ್ದರು ಎಂದು ಶಾ ಅವರ ಮಾಜಿ ಕೆಲಸಗಾರನೋರ್ವ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಶಾಹು ನಿರಾಕರಿಸಿದ್ದಾರೆ.
ಉತ್ತರಪ್ರದೇಶದ ಬರೇಲಿ ನಿವಾಸಿಯಾಗಿರುವ ನರೇಶ್ ನೈನಿತಾಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಾಹು ಅವರ ಮೊದಲ ಪತ್ನಿ ವೈಜಂತಿ ಮಾಲಾ ಅವರಿಗೆ ಕಿಡ್ನಿ ದಾನ ಮಾಡಲು ಒಪ್ಪಿದರೆ ಶ್ರೀಲಂಕಾಕ್ಕೆ ಕರೆದುಕೊಂಡು ಹೋಗ ಲಾಗುವುದು, ಫ್ಲಾಟ್ ಹಾಗೂ ಹಣ ನೀಡಲಾಗುವುದು ಎಂದು ಶಾಹು ಆಮಿಷ ತೋರಿಸಿದ್ದಾರೆ. ಆದರೆ, ತನ್ನ ಭರವಸೆಯನ್ನು ಅವರು ಈಡೇರಿಸಿಲ್ಲ ಎಂದು ದೂರಿದ್ದಾರೆ.
ಉತ್ತರಾಖಂಡದ ತೆರಾಯಿ ವಲಯ ಹಾಗೂ ಕಿಚ್ಛಾ ಪೊಲೀಸ್ ಠಾಣೆಯಲ್ಲಿ ಭೂ ಹಗರಣ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ಶಾಹು ಎದುರಿಸುತ್ತಿದ್ದಾರೆ. ಈ ಪ್ರಕರಣ ಮೂರು ವರ್ಷಗಳ ಹಳೆಯದು.
ನರೇಶ್ ಕಿಡ್ನಿ ತನ್ನ ಪತ್ನಿ ವೈಜಯಂತಿಗೆ ಹೊಂದಾಣಿಕೆ ಆಗುತ್ತದೆ. ಆದುದರಿಂದ ಕಿಡ್ನಿ ದಾನ ಮಾಡುತ್ತೇನೆ ಎಂದು ಆತ ಹೇಳಿದ್ದ. ನಾನು ಫ್ಲಾಟ್ ಹಾಗೂ ಹಣ ನೀಡುವ ಭರವಸೆ ನೀಡಿರಲಿಲ್ಲ. ಅದೆಲ್ಲವೂ ಸುಳ್ಳು ಎಂದಿದ್ದಾರೆ ಎಂದು ಶಾಹು ಸಮರ್ಥಿಸಿಕೊಂಡಿದ್ದಾರೆ.
13 ವೈದ್ಯರಿರುವ ತಂಡ ಶ್ರೀಲಂಕಾದಲ್ಲಿ ನನ್ನ ಪತ್ನಿಯ ಕಿಡ್ನಿ ಕಸಿಗೆ ನಿರ್ಧರಿಸಿತ್ತು. ನರೇಶ್ ತನ್ನ ಕಿಡ್ನಿ ನೀಡಲು ಒಪ್ಪಿಕೊಂಡ ಬಳಿಕ ಎಲ್ಲ ನಿಯಮಗಳನ್ನು ಪಾಲಿಸಲಾಗಿತ್ತು ಎಂದು ಶಾಹು ಹೇಳಿದ್ದಾರೆ.







