ವಿದ್ಯಾರ್ಥಿಯನ್ನು ವಜಾಗೊಳಿಸಲು ಎಫ್‌ಐಆರ್ ಕಾರಣವಾಗದು: ಹೈಕೋರ್ಟ್

ಮುಂಬೈ, ಅ. 14: ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಜಾಗೊಳಿಸಿ ಕಾಲೇಜೊಂದು ಹೊರಡಿಸಿದ ಆದೇಶ ರದ್ದುಪಡಿಸಿರುವ ಬಾಂಬೆ ಉಚ್ಚ ನ್ಯಾಯಾಲಯ, ಪ್ರಥಮ ಮಾಹಿತಿ ವರದಿಯನ್ನು ಅಂತಿಮ ಸತ್ಯ ಎಂದು ಅಭಿಪ್ರಾಯಿಸಲು ಸಾಧ್ಯವಿಲ್ಲ ಹಾಗೂ ಇದು ವಜಾಗೊಳಿಸಲು ಸೂಕ್ತ ಕಾರಣವಾಗಲಾರದು ಎಂದಿದೆ.
21 ವರ್ಷದ ವಿದ್ಯಾರ್ಥಿಯನ್ನು ವಜಾಗೊಳಿಸಿ ನರ್ಸೀ ಮೊಂಜೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸ್ವಾಮ್ಯ ಹೊಂದಿರುವ ಮುಖೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಆ್ಯಂಡ್ ಇಂಜಿನಿಯರಿಂಗ್ ಆಗಸ್ಟ್ 5ರಂದು ಮಾಡಿದ ಆದೇಶವನ್ನು ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ಎಸ್.ಕೆ. ಶಿಂಧೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ರದ್ದುಗೊಳಿಸಿದೆ.
ವಿವಾಹವಾಗುತ್ತೇನೆ ಎಂದು ನಂಬಿಸಿ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಆರೋಪದಲ್ಲಿ ಜೂನ್‌ನಲ್ಲಿ ಎಫ್‌ಐಆರ್ ದಾಖಲಾದ ಬಳಿಕ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ ಕಾಲೇಜಿನಿಂದ ಅಮಾನತುಗೊಳಿಸಿತ್ತು.
ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
Next Story







