ನಾಪತ್ತೆಯಾದವನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಫ್ರಿಜ್ ನಲ್ಲಿ ಪತ್ತೆ !

ಹೊಸದಿಲ್ಲಿ, ಅ. 15: ವಿಲಕ್ಷಣ ಘಟನೆಯೊಂದರಲ್ಲಿ 26 ವರ್ಷದ ವ್ಯಕ್ತಿಯನ್ನು ಹತ್ಯೆಗೈದು ದೇಹ ತುಂಡರಿಸಿ ಫ್ರಿಜ್ ನಲ್ಲಿ ತುಂಬಿಸಿಟ್ಟ ಘಟನೆ ದಕ್ಷಿಣ ದಿಲ್ಲಿಯ ಸೈದುಲ್ಲಾಜಾಬ್ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತನಾದ ವ್ಯಕ್ತಿ ಉತ್ತರಾಖಂಡದ ವಿಪಿನ್ ಜೋಷಿ ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳಿಂದ ಜೋಷಿ ನಾಪತ್ತೆಯಾಗಿದ್ದರು. ಅವರ ಕುಟುಂಬದ ಸದಸ್ಯರು ಅವರ ಹುಡುಕಾಟ ನಡೆಸುತ್ತಿದ್ದರು. ನಿನ್ನೆ ಸಂಜೆ ಕುಟುಂಬದ ಸದಸ್ಯರು ಜೋಷಿ ಗೆಳೆಯ ಬಾದಲ್ ಮಂಡಲ್‌ನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಜೋಷಿ ಪತ್ತೆಯಾಗಿರಲಿಲ್ಲ.
ಅಂತಿಮವಾಗಿ ಕುಟುಂಬಿಕರು ಜೋಷಿಯ ಮನೆಗೆ ಧಾವಿಸಿದರು. ಆದರೆ, ಮನೆಗೆ ಬೀಗ ಹಾಕಲಾಗಿತ್ತು. ಕಟ್ಟಡದಿಂದ ದುರ್ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮನೆ ಬಾಗಿಲು ಒಡೆದು ಪ್ರವೇಶಿಸಿ ಪರಿಶೀಲಿಸಿದಾಗ ಪ್ರಿಜ್ಜ್ ಒಳಗಡೆ ಛಿದ್ರಗೊಂಡ ದೇಹದ ಅಂಗಾಂಗಗಳು ಪತ್ತೆಯಾದವು.
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿ ಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





