ಶಿಕಾರಿಪುರ : ವಡ್ಡನಹಾಳ್ ಶ್ರೀ ವಿಶ್ವಕರ್ಮ ಸಮುದಾಯ ಸೇವಾ ಟ್ರಸ್ಟ್ (ರಿ) ಉದ್ಘಾಟನೆ

ಶಿಕಾರಿಪುರ,ಅ.15 ಹುಟ್ಟಿನಿಂದ ಹಲವು ಬಗೆಯ ಕೌಶಲ್ಯವನ್ನು ಹೊಂದಿರುವ ವಿಶ್ವಕರ್ಮರು ಸಮಾಜದಲ್ಲಿ ಇತರೆ ಸಮುದಾಯಕ್ಕಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದರು.
ರವಿವಾರ ಪಟ್ಟಣದ ಸುರಭಿ ಭವನದಲ್ಲಿ ತಾಲೂಕು ಮಟ್ಟದ ಪ್ರಥಮ ವಡ್ಡನಹಾಳ್ ಶ್ರೀ ವಿಶ್ವಕರ್ಮ ಸಮುದಾಯ ಸೇವಾ ಟ್ರಸ್ಟ್ (ರಿ) ಉದ್ಘಾಟಿಸಿ ಅವರು ಮಾತನಾಡಿದರು.
ಚಿನ್ನ ಬೆಳ್ಳಿ,ಕಮ್ಮಾರಿಕೆ,ಬಡಗಿ,ಶಿಲ್ಪಕಲೆ ಕೆತ್ತನೆ ಮತ್ತಿತರ ಹಲವು ವೃತ್ತಿಯನ್ನು ಕುಲಕಸುಬನ್ನಾಗಿಸಿಕೊಂಡ ವಿಶ್ವಕರ್ಮರಿಗೆ ಕೌಶಲ್ಯದ ತರಬೇತಿ ಜನ್ಮದಿಂದ ದೊರೆತ ಅಪರೂಪದ ಕೊಡುಗೆಯಾಗಿದೆ ಎಂದ ಅವರು ಹಲವು ಕುಲಕಸುಬಗಳನ್ನು ಅಳವಡಿಸಿಕೊಂಡ ಏಕೈಕ ವಿಶ್ವಕರ್ಮ ಸಮಾಜದಲ್ಲಿ ಕುಲಕಸುಬ ರೀತಿಯಲ್ಲಿ ಹಲವು ಉಪಪಂಗಡಗಳನ್ನು ಹೊಂದಿದ್ದು ಸಂಘಟನಾತ್ಮಕವಾಗಿ ಸಮಾಜ ಸದೃಡಗೊಳ್ಳಲು ಉಪಪಂಗಡಗಳು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ತಿಳಿಸಿದರು.
ವಿಶ್ವಕರ್ಮ ಜಗತ್ತು ಸೃಷ್ಟಿಸಿದ ಇತಿಹಾಸವಿದ್ದು ಈ ದಿಸೆಯಲ್ಲಿ ಭಗವಂತನಿಗೆ ಸಮೀಪದ ವಿಶ್ವಕರ್ಮರು ಇತಿಹಾಸವನ್ನು ಅರಿಯಬೇಕಾಗಿದೆ.ಜಕಣಾಚಾರಿ ಮತ್ತಿತರ ಸಾಧನೆಯನ್ನು ಅರಿತಲ್ಲಿ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಬಹುದಾಗಿದೆ ಎಂದ ಅವರು ಕೌಶಲ್ಯ ಶಿಲ್ಪಕಲೆ ರಕ್ತಗತವಾಗಿರುವ ವಿಶ್ವಕರ್ಮರ ಕಸುಬು ಅಪರೂಪವಾಗಿದ್ದು ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ಆರಂಭಕ್ಕೆ ಮಾತ್ರ ಸೀಮಿತವಾಗದೆ ಗುರುಗಳ ಮಾರ್ಗದರ್ಶನದಲ್ಲಿ ವರ್ಷಪೂರ್ತಿ ನಿರಂತರ ಚಟುವಟಿಕೆಯ ಕೇಂದ್ರವಾಗಿ ಸಮಾಜದ ಅಭಿವೃದ್ದಿಗೆ ಪೂರಕವಾಗಿರಬೇಕು ಎಂದ ಅವರು ಪಟ್ಟಣ ವ್ಯಾಪ್ತಿಯಲ್ಲಿ ಸಮಾಜದ ಸಕ್ರೀಯ ಕಾರ್ಯಗಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಪುರಸಭೆ ವತಿಯಿಂದ ಶೀಘ್ರ ನಿವೇಶನ ಮಂಜೂರಾತಿಗೆ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದರು.
ದಿವ್ಯ ಸಾನಿದ್ಯ ವಹಿಸಿದ್ದ ವಡ್ಡನಹಾಳ್ ಬೆಲಗೂರು ವಿಶ್ವಬ್ರಾಹ್ಮಣ ಸಂಸ್ಥಾನ ಮಠದ ಶ್ರೀ ಅಭಿನವ ದೇವಣಾಚಾರ್ಯ ಮಹಾಸ್ವಾಮಿಗಳು ಆಶೀರ್ವದಿಸಿ,ವಿಶ್ವಕರ್ಮ ಸಮಾಜಕ್ಕೆ ಸಹಸ್ರಾರು ವರ್ಷದ ಇತಿಹಾಸವಿದ್ದು ಯುಗ ಯುಗದ ಪರಂಪರೆಯನ್ನು ಹೊಂದಿದೆ ಎಂದರು.ದ್ವಾರಕಾ,ಇಂದ್ರಪ್ರಸ್ಥ,ಲಂಕೆಯನ್ನು ನಿರ್ಮಿಸಿದ ಬಹುದೊಡ್ಡ ಹಿನ್ನಲೆಯಿದ್ದು ಅಜಂತಾ,ಎಲ್ಲೋರಾ,ಕೋನಾರ್ಕ ಮತ್ತಿತರ ವಿಶ್ವಪ್ರಸಿದ್ದ ದೇವಾಲಯಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಕಲಾ ನೈಪುಣ್ಯತೆ ಜಗತ್ತಿನ ಗಮನ ಸೆಳೆಯುತ್ತಿದೆ ಎಂದರು.
ಕೃಷಿ ಪ್ರಧಾನ ಭಾರತಕ್ಕೆ ರೈತ ಬೆನ್ನೆಲುಬಾಗಿದ್ದು,ವಿಶ್ವಕರ್ಮರು ರೈತರ ಬೆನ್ನೆಲುಬಾಗಿದ್ದಾರೆ ಎಂದ ಅವರು ಜಾತಿ ಮತ ಧರ್ಮ ಬೇಧ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೆ ಕಸುಬಿಗನುಗುಣವಾಗಿ ಸಾಧನ ಸಲಕರಣೆಯನ್ನು ನಿರ್ಮಿಸುವಲ್ಲಿ ಸಿದ್ದಹಸ್ತರಾದ ವಿಶ್ವಕರ್ಮರು ವೈಯುಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಗಮನ ನೀಡದೆ ಸಮಾಜದಲ್ಲಿ ಆರ್ಥಿಕ,ರಾಜಕೀಯ,ಶೈಕ್ಷಣಿಕ,ಧಾರ್ಮಿಕವಾಗಿ ಹಿಂದುಳಿದಿದ್ದಾರೆ ಎಂದು ತಿಳಿಸಿದರು.
ಸಂಘಟನೆ ಮೂಲಕ ಸದೃಡ ಸಮಾಜ ನಿರ್ಮಾಣವಾಗಲಿದ್ದು ಈ ದಿಸೆಯಲ್ಲಿ ಟ್ರಸ್ಟ್ ಅಡಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರಗತಿಯನ್ನು ಸಾಧಿಸುವಂತೆ ಕರೆ ನೀಡಿದರು.
ವಡ್ಡನಹಾಳ್ ವಿಶ್ವಕರ್ಮ ಮಠದ ಅಧ್ಯಕ್ಷ ಪ್ರಕಾಶಾಚಾರ್ ಮಾತನಾಡಿ,ಶ್ರೀ ಮಠದ ಬಗ್ಗೆ ಭಕ್ತರಿಗೆ ಸೂಕ್ತ ಮಾಹಿತಿ ಕೊರತೆಯಿದ್ದು ಇತ್ತೀಚಿನ ವರ್ಷದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ನಿರ್ದೇಶಕರನ್ನು ನೇಮಿಸಿಕೊಂಡು ಮಠದ ಕಾರ್ಯದ ಬಗ್ಗೆ ಭಕ್ತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.ಶ್ರೀಗಳ ಪಟ್ಟಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ಭಕ್ತರು ಸಹಕರಿಸುವಂತೆ ಕೋರಿದರು.
ಪ್ರಾಸ್ಥಾವಿಕವಾಗಿ ಟ್ರಸ್ಟ್ ಖಜಾಂಚಿ ನಾಗರಾಜಾಚಾರ್ ಮಾತನಾಡಿದರು.ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಮಂಜಾಚಾರ್ ವಹಿಸಿ ಮಾತನಾಡಿದರು.ಗೌರವಾಧ್ಯಕ್ಷ ಮಂಜಪ್ಪ ಆಚಾರ್,ಗ್ರಾ.ಪಂ ಉಪಾಧ್ಯಕ್ಷೆ ನಾಗರತ್ನಮ್ಮ,ಸದಸ್ಯ ಹೂವಾಚಾರ್,ವಡ್ಡನಹಾಳ್ ಮಠದ ವೀರಭದ್ರಾಚಾರ್,ವಿಜಯ ನಾರಾಯಣಾಚಾರ್,ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಮೇಘನಾ ಅಕ್ಷತಾ ಪ್ರಾರ್ಥಿಸಿ,ದಿವಾಕರ್ ಸ್ವಾಗತಿಸಿ,ಶೈಲಾ ನಿರೂಪಿಸಿ,ಜಗದೀಶಾಚಾರ್ ವಂದಿಸಿದರು.







