25 ವರ್ಷಗಳ ಹಿಂದೆ ಹತ್ಯೆಯಾದ ತಂದೆಯ ಕನಸು ನನಸಾಗಿಸಿದ ಪುತ್ರಿ

ಮುಜಾಪ್ಫರ್‌ನಗರ್, ಅ. 15: ಬುಲೆಟ್‌ನಿಂದ ಜರ್ಜರಿತ ದೇಹವನ್ನು ಮನೆಗೆ ತಂದಾಗ ಅಂಜುಮ್ ಸೈಫಿ ಕೇವಲ 4 ವರ್ಷದ ಮಗು. ಅದು ನಡೆದದ್ದು 1992ರಲ್ಲಿ. ಆಕೆಯ ತಂದೆ ರಶೀದ್ ಅಹ್ಮದ್ ಮಾರುಕಟ್ಟೆಯಲ್ಲಿ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದರು ಹಾಗೂ ಹಫ್ತಾ ವಸೂಲಿ ಮಾಡುವವರನ್ನು ವಿರೋಧಿಸಿದ್ದರು. ಅಲ್ಲದೆ ಪೊಲೀಸ್ ಭದ್ರತೆ ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದರು. ಒಂದು ದಿನ ಗೂಂಡಾಗಳು ಬೀದಿಬದಿ ವ್ಯಾಪಾರಿಗಳಿಂದ ಹಣ ವಸೂಲು ಮಾಡಲು ಪ್ರಯತ್ನಿಸಿದರು. ಅಹ್ಮದ್ ಮತ್ತೊಮ್ಮೆ ವಿರೋಧಿಸಿದರು. ಗೂಂಡಾಗಳು ಹಾಡಹಗಲೇ ಅವರನ್ನು ಗುಂಡಿಟ್ಟು ಕೊಂದರು. ಆಗ ತಂದೆ ಆಕೆಯಲ್ಲಿ “ನೀನು ನ್ಯಾಯಾಧೀಶೆ ಆಗಬೇಕು” ಎಂದು ಕೇಳಿಕೊಂಡಿದ್ದರು.
25 ವರ್ಷಗಳ ಬಳಿಕ ಶುಕ್ರವಾರ 29 ವರ್ಷದ ಅಂಜುಮ್ ತನ್ನ ತಂದೆಯ ಆಸೆ ನೆರವೇರಿಸಿದ್ದಾರೆ. ಉತ್ತರಪ್ರದೇಶ ನಾಗರಿಕ ಸೇವಾ ಆಯೋಗ ನಡೆಸಿದ ಸಿವಿಲ್ ನ್ಯಾಯಾಧೀಶ ಜೂನಿಯರ್ ಪರೀಕ್ಷೆಯಲ್ಲಿ ಅಂಜುಂ ತೇರ್ಗಡೆ ಹೊಂದಿದ್ದಾರೆ.
ಫಲಿತಾಂಶ ಘೋಷಿಸುತ್ತಿದ್ದಂತೆ ಅವರ ಊರಿನಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಅಂಜುಮ್‌ನ ತಾಯಿ ಹಮೀದಾ ಬೇಗಮ್ ತಿಳಿಸಿದ್ದಾರೆ. ದಿನಪೂರ್ತಿ ಅವರು ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಈ ವಿಷಯ ತಿಳಿಸಿ ಸಂಭ್ರಮಿಸಿದ್ದಾರೆ.
“ನಾವು ಪತಿಯ ಕೊಲೆ ಪ್ರಕರಣವನ್ನು ಹಿಂದೆ ತೆಗೆದುಕೊಂಡಿದ್ದೇವೆ. ಯಾಕೆಂದರೆ ನಮ್ಮ ಗುರಿ ಇರುವುದು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದು. ಅವರ ಜೀವವನ್ನು ಅಪಾಯಕ್ಕೆ ದೂಡುವುದು ಅಲ್ಲ. ನನ್ನ ಪತಿ ಮೌಲ್ಯ ಹಾಗೂ ಸಿದ್ಧಾಂತಗಳನ್ನು ಮಕ್ಕಳಲ್ಲಿ ಬಿತ್ತಿದ್ದರು. ಅದು ಈಗ ಫಲ ನೀಡಲು ಆರಂಭಿಸಿದೆ” ಎಂದು ಹಮೀದಾ ಬೇಗಮ್ ತಿಳಿಸಿದ್ದಾರೆ.
“ನನ್ನ ತಂದೆ ಸತ್ಯಕ್ಕಾಗಿ ಹೋರಾಡಿದರು. ಸಮಾಜವನ್ನು ಬದಲಾಯಿಸಲು ಪ್ರಯತ್ನಿಸಿದರು. ಆದರೆ, ಆಗ ಇದ್ದ ವ್ಯವಸ್ಥೆ ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಒಂದೇ ಗುರಿ ಇರುವುದು ಅವರ ಮೌಲ್ಯಗಳನ್ನು ಎತ್ತಿ ಹಿಡಿಯುವುದು. ಈಗ ವ್ಯವಸ್ಥೆಯನ್ನು ಬದಲಾಯಿಸಲು ದೇವರು ನನಗೆ ಅಧಿಕಾರ ನೀಡಿದ್ದಾನೆ. ನನಗೆ ಸಾಧ್ಯವಾಗುವುದನ್ನು ಮಾಡಲು ಪ್ರಯತ್ನಿಸುತ್ತೇನೆ. ನನ್ನ ತಂದೆಯ ಬಲಿದಾನ ವ್ಯರ್ಥವಾಗಬಾರದು” ಎಂದು ಅಂಜುಮ್ ಸೈಪಿ ಹೇಳಿದ್ದಾರೆ.







