‘ರಾಜಶಕ್ತಿ’ಯ ವಿರುದ್ಧ ‘ಲೋಕಶಕ್ತಿ’ಯ ಹೋರಾಟಕ್ಕೆ ಯಶವಂತ ಸಿನ್ಹಾ ಕರೆ
ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ಮತ್ತೊಮ್ಮೆ ಟೀಕಿಸಿದ ಬಿಜೆಪಿಯ ಹಿರಿಯ ನಾಯಕ

ಮುಂಬೈ,ಅ.16: ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಮತ್ತೆ ದಾಳಿ ನಡೆಸಿದ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶವಂತ ಸಿನ್ಹಾ ಅವರು, ‘ರಾಜಶಕ್ತಿ(ಸರಕಾರ)’ಯ ವಿರುದ್ಧ ‘ಲೋಕಶಕ್ತಿ (ಜನ ಶಕ್ತಿ)’ ಹೋರಾಟಕ್ಕೆ ಕರೆ ನೀಡಿದರು.
ಮಹಾರಾಷ್ಟ್ರದ ವಿದರ್ಭ ಪ್ರದೇಶದ ಅಕೋಲಾದಲ್ಲಿ ರೈತರ ಎನ್‌ಜಿಒ ಶೇತ್ಕರಿ ಜಾಗರ್ ಮಂಚ್ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಜಾರಿ ಮತ್ತು ನೋಟು ಅಮಾನ್ಯ ಕ್ರಮಕ್ಕಾಗಿ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದರು.
ಲೋಕನಾಯಕ ಜಯಪ್ರಕಾಶ ನಾರಾಯಣ ಅವರನ್ನು ಉಲ್ಲೇಖಿಸಿದ ಸಿನ್ಹಾ, ಸರಕಾರವನ್ನು ಹದ್ದುಬಸ್ತಿನಲ್ಲಿಡಲು ‘ಲೋಕಶಕ್ತಿ’ ಆಂದೋಲನವನ್ನು ಆರಂಭಿಸುವಂತೆ ಜನ ಸಮುದಾಯವನ್ನು ಕೋರಿಕೊಂಡರು.
ಅಕೋಲಾದಿಂದಲೇ ಈ ಆಂದೋಲನವನ್ನು ಆರಂಭಿಸೋಣ ಎಂದರು.
‘‘ನಾವೀಗಾಗಲೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದೇವೆ. ಸರಕಾರವು ಮುಂದಿಡುತ್ತಿರುವ ಈ ಅಂಕಿಸಂಖ್ಯೆಗಳಾದರೂ ಏನು? ಈ ಅಂಕಿಸಂಖ್ಯೆಗಳು ಒಂದು ವಿಷಯವನ್ನು ಸಾಬೀತುಗೊಳಿಸಬಹುದು ಮತ್ತು ಇದೇ ಅಂಕಿಸಂಖ್ಯೆಗಳನ್ನು ಬಳಸಿ ಅದರ ವಿರುದ್ಧವಾದುದನ್ನೂ ಸಾಬೀತು ಮಾಡಬಹುದು’’ಎಂದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆತ್ತಿಕೊಂಡ ಅವರು, ಸರಕಾರದ ಮುಖ್ಯಸ್ಥರು ಭಾರತದ ಪ್ರಗತಿಯನ್ನು ತೋರಿಸಲು ಇತ್ತೀಚಿಗೆ ಮಾಡಿದ ಭಾಷಣದಲ್ಲಿ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿ ದೇಶದಲ್ಲಿ ಇಷ್ಟೊಂದು ಕಾರುಗಳು ಮತ್ತು ಬೈಕ್‌ಗಳು ಮಾರಾಟವಾಗುತ್ತಿವೆ ಎಂದು ಹೇಳಿದ್ದಾರೆ. ದೇಶವು ಪ್ರಗತಿ ಹೊಂದುತ್ತಿದೆ ಎನ್ನುವುದು ಇದರ ಅರ್ಥವೇ? ಮಾರಾಟವಾಗಿರಬಹುದು, ಆದರೆ ಉತ್ಪಾದನೆ ಎಲ್ಲಿದೆ ಎಂದು ಪ್ರಶ್ನಿಸಿದರು.
‘‘ಈ ಕಾರ್ಯಕ್ರಮದಲ್ಲಿ ನೋಟು ಅಮಾನ್ಯದ ಬಗ್ಗೆ ಮಾತನಾಡಲು ನಾನು ಬಯಸು ವುದಿಲ್ಲ. ಅಷ್ಟಕ್ಕೂ ವಿಫಲ ಕ್ರಮವೊಂದರ ಬಗ್ಗೆ ಮಾತನಾಡಲು ಏನಿದೆ’’ ಎಂದರು.
‘‘ನಾವು ಪ್ರತಿಪಕ್ಷವಾಗಿದ್ದಾಗ ಆಗಿನ ಸರಕಾರದ ತೆರಿಗೆ ಭಯೋತ್ಪಾದನೆ ಮತ್ತು ‘ದಾಳಿ ರಾಜ್’ ಬಗ್ಗೆ ಆರೋಪಿಸುತ್ತಿದ್ದೆವು. ಭಯೋತ್ಪಾದನೆ ಅಂತಿಮ ಶಬ್ದವಾಗಿರುವುದರಿಂದ ಇಂದು ಏನಾಗುತ್ತಿದೆ ಎನ್ನುವುದನ್ನು ವ್ಯಕ್ತಪಡಿಸಲು ನನ್ನ ಬಳಿ ಶಬ್ದಗಳೇ ಇಲ್ಲ’’ಎಂದು ಸಿನ್ಹಾ ನುಡಿದರು.
ಜಿಎಸ್‌ಟಿ ಒಂದು ಒಳ್ಳೆಯ ಮತ್ತು ಸರಳ ತೆರಿಗೆ ವ್ಯವಸ್ಥೆಯಾಗಬಹುದಿತ್ತು, ಆದರೆ ಅಧಿಕಾರದಲ್ಲಿರುವ ಜನರು ಅದನ್ನು ಕೆಟ್ಟ ಮತ್ತು ಜಟಿಲ ತೆರಿಗೆಯನ್ನಾಗಿ ಮಾಡಿದ್ದಾರೆ ಎಂದ ಅವರು, ಜಿಎಸ್‌ಟಿ ಜಾರಿಯಲ್ಲಿನ ಅಸಂಗತತೆಗಳನ್ನು ನಿವಾರಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.
‘‘ಜಾರ್ಖಂಡ್ ನನ್ನ ರಾಜ್ಯ.ಅಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಅದೇನಾಗಿದೆಯೋ ನನಗೆ ಗೊತ್ತಿಲ್ಲ. ಅಲ್ಲಿಯೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’’ ಎಂದರು.
ವೃತ್ತಪಪತ್ರಿಕೆಯೊಂದರಲ್ಲಿ ಲೇಖನದ ಮೂಲಕ ತಾನು ಇತ್ತೀಚಿಗೆ ಸರಕಾರದ ವಿರುದ್ಧ ವ್ಯಕ್ತಪಡಿಸಿದ್ದ ಆಕ್ರೋಶದ ಕುರಿತು ಸಿನ್ಹಾ, ‘‘ತಮ್ಮ ಮನಸ್ಸಿನಲ್ಲಿದ್ದ ಮಾತುಗಳನ್ನೇ ನಾನು ಹೇಳಿದ್ದೇನೆ ಎಂದು ಜನರು ಭಾವಿಸಿದ್ದಾರೆ’’ ಎಂದು ಹೇಳಿದರು.







