ಮಕ್ಕಳ ರಕ್ಷಣೆ ಯಾವುದೇ ಮುಲಾಜಿಲ್ಲದೆ ಮಾಡಿ: ಸಚಿವ ಪ್ರಮೋದ್

ಉಡುಪಿ, ಅ.16: ಮಕ್ಕಳ ರಕ್ಷಣೆಯ ಕಾನೂನಿಗೆ ಶಕ್ತಿ ಬರಬೇಕಾದರೆ ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು. ಆ ಜವಾಬ್ದಾರಿ ಪೊಲೀಸ್ ಹಾಗೂ ಇತರ ಇಲಾಖೆಗಳ ಮೇಲಿದೆ. ಮಕ್ಕಳ ರಕ್ಷಣೆಯನ್ನು ಯಾವುದೇ ರೀತಿಯ ವಿನಾಯಿತಿ ನೀಡದೆ ಹಾಗೂ ಮುಲಾಜಿಲ್ಲದೆ ಮಾಡಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜಿಪಂ ಸದಸ್ಯರು, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಗ್ರಾಪಂ ನೋಡಲ್ ಅಧಿಕಾರಿಗಳಿಗೆ ಸೋಮವಾರ ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾದ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ, ಮಕ್ಕಳ ಗ್ರಾಮ ಸಭೆ, ಪೋಕ್ಸೊ ಕಾಯಿದೆ ಮತ್ತು ಬಾಲನ್ಯಾಯ ಕಾಯಿದೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಕ್ಕಳ ಜನಸಂಖ್ಯೆ ಇರುವ ದೇಶ ಭಾರತ. ಚೀನಾ, ಆಸ್ಟ್ರೇಲಿಯಾ, ಜಪಾನ್‌ಗಳಂತಹ ದೇಶಗಳು ಮಕ್ಕಳ ಕೊರತೆಯನ್ನು ಎದುರಿಸುತ್ತಿವೆ. ಮಕ್ಕಳ ಸಂಪನ್ಮೂಲದಲ್ಲಿ ಭಾರತವು ಚೀನಾವನ್ನು ಕೂಡ ಮೀರಿ ಸಿದೆ. ನಮ್ಮ ದೇಶದ ಮಕ್ಕಳು ಕೇವಲ ಭಾರತದ ಆಸ್ತಿ ಅಲ್ಲ, ಇಡೀ ಪ್ರಪಂಚದ ಆಸ್ತಿಯಾಗಿದ್ದಾರೆ. ಭವಿಷ್ಯದಲ್ಲಿ ಇಡೀ ಜಗತ್ತಿನ ಜವಾಬ್ದಾರಿ ಹಾಗೂ ನೇತೃತ್ವ ವನ್ನು ವಹಿಸಿಕೊಳ್ಳುವ ಅವಕಾಶ ನಮ್ಮ ಮಕ್ಕಳಿಗೆ ದೊರೆಯಲಿದೆ. ಆ ಅಮೂಲ್ಯ ಸಂಪತ್ತು ನಾಶವಾಗದಂತೆ ಕಾಪಾಡುವುದು ಸಮಾಜ, ಸಂಘಟನೆ ಹಾಗೂ ಸರಕಾರಗಳ ಜವಾಬ್ದಾರಿಯಾಗಿದೆ ಎಂದರು.
ತಮ್ಮ ಮೇಲೆ ಆಗುತ್ತಿರುವ ಅನ್ಯಾಯವನ್ನು ಪ್ರತಿರೋಧಿಸುವ ಶಕ್ತಿ ಮಕ್ಕಳಿಗೆ ಇಲ್ಲ. ಮುಗ್ದ ಮಕ್ಕಳ ಮೇಲೆ ಮನೆ ಒಳಗೆ, ಹೊರಗೆ, ಶಾಲೆಯಲ್ಲಿ, ಸಂಬಂಧಿಕರ ಮನೆಯಲ್ಲಿ ದೌರ್ಜನ್ಯ, ಶೋಷಣೆ ನಡೆಯುತ್ತಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣೆ ಕುರಿತ ಕಾನೂನು ಜಾಗೃತಿಯನ್ನು ಹೆತ್ತವರಲ್ಲಿ ಮೂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೋರ್ವಿ ಮಾತನಾಡಿ, ಈಗ ಉಡುಪಿ ಜಿಲ್ಲೆಯಲ್ಲೂ ಪೊಕ್ಸೋ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಮಕ್ಕಳ ಗ್ರಾಮ ಸಭೆಯನ್ನು ಸರಿಯಾಗಿ ನಡೆಸುವ ಕೆಲಸವನ್ನು ಪಿಡಿಓ ಹಾಗೂ ಶಿಕ್ಷಕರು ಮಾಡಬೇಕು. ಆ ಮೂಲಕ ಮಕ್ಕಳ ಹಕ್ಕುಗಳನ್ನು ತಿಳಿಹೇಳಬೇಕಾಗಿದೆ. ಶಿಕ್ಷಣ, ವಸತಿ, ಆಹಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳ ರಕ್ಷಣೆ ಆಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು.







