ಕಾಂಗ್ರೆಸ್‍ನಲ್ಲಿ ಲಾಭ ಪಡೆದು ದ್ರೋಹ ಎಸಗಿದವರ ಪರಿಸ್ಥಿತಿ ಏನಾಗಿದೆ ಎಂದು : ದಿನೇಶ್ ಗುಂಡೂರಾವ್

ಸೊರಬ,ಅ.16: ಕಾಂಗ್ರೆಸ್‍ನಲ್ಲಿ ಇದ್ದುಕೊಂಡು ಅನೇಕ ಹುದ್ದೆಗಳನ್ನು ಅನುಭವಿಸಿ ಸಂಪೂರ್ಣ ಲಾಭ ಪಡೆದು ಪಕ್ಷಕ್ಕೆ ದ್ರೋಹ ಮಾಡಿ ಹೊರಹೋದವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಈಗಾಗಲೇ ಕಂಡಿದ್ದೇವೆ. ಅಂತಹವರ ಬಗ್ಗೆ ತೆಲೆಕಡಿಸಿಕೊಳ್ಳದೆ ಪಕ್ಷದ ಸಂಘಟನೆಗೆ ಮುಂದಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸೋಮವಾರ ಪಟ್ಟಣದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಪಕ್ಷದಲ್ಲಿದ್ದ ಸಂದರ್ಭದಲ್ಲಿ ಉನ್ನತ ಮಟ್ಟಕ್ಕೆ ಬೆಳೆದ ವ್ಯಕ್ತಿ ಏಕಾಏಕಿ ಪಕ್ಷ ತ್ಯಜಿಸಿದಾಗ ಬೇಸರ ಮೂಡುವುದು ಸಹಜ. ಹೊರಹೋದವರ ಬಗ್ಗೆ ಪಕ್ಷದ ಕಾರ್ಯಕರ್ತರು ಚಿಂತಿಸದೆ ಪಕ್ಷದ ಬಲವರ್ದನೆಗಾಗಿ ಮುಂಚುಣಿಯಲ್ಲಿ ಕಾರ್ಯನಿರ್ವಹಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನಿಂದ ಗೆಲ್ಲುವಂತಹ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು. ಕಾಯಕರ್ತರು, ಮುಖಂಡರುಗಳು ಸುಮ್ಮನೆ ಕೂರದೇ ಪಕ್ಷವನ್ನು ಸಂಘಟಿಸುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತ್ರತ್ವದ ರಾಜ್ಯ ಕಾಂಗ್ರೆಸ್ ಹಿಂದಿನ ಚುನಾವಣಾ ಸಂದರ್ಭದಲ್ಲಿ ನೀಡಿದ್ದ, ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಹುತೇಕ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಪ್ರತಿಯೊಂದು ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ನಾಲ್ಕು ವರ್ಷ ಅಧಿಕಾರಾವಧಿಯನ್ನು ಭ್ರಷ್ಟಾಚಾರರಹಿತ, ಹಗರಣರಹಿತ ಆಡಳಿತ ನೀಡಿದ್ದು, ರಾಜ್ಯದ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ. ಬಡವರ, ದೀನದಲಿತರ, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ, ಎಲ್ಲಾ ಜಾತಿ-ಜನಾಂಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಸಫಲವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿಯಾದವರು ತಮ್ಮ ಘನತೆ, ಗೌರವವನ್ನು ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ಯಡಿಯೂರಪ್ಪನವರಿಗೆ ಶೋಭೆ ತರುವುದಂತಹದಲ್ಲ. ಜೆಡಿಎಸ್ ರಾಜ್ಯದಲ್ಲಿ ಮುಳುಗುವ ಪಕ್ಷವಾಗಿದ್ದು, ರಾಜ್ಯ ಕಾಂಗ್ರೆಸ್ ನೀಡಿದ 94ಸಿ, 94ಸಿಸಿ, ಬಗರ್‍ಹುಕುಂ ಹಕ್ಕು ಪತ್ರಗಳನ್ನು ವಿತರಸಿದ್ದಾರೆ ಹೊರತು ಶಾಸಕ ಮಧುಬಂಗಾರಪ್ಪನವರ ಸಾದನೆ ಏನೂ ಇಲ್ಲ ಎಂದ ಅವರು ಪಕ್ಷದ ಅಭ್ಯರ್ಥಿಯಾಗ ಬಯಸುವವರು ಪ್ರತಿ ಮನೆಮನೆಗೆ ಭೇಟಿ ನೀಡಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಬಿಜೆಪಿಯವರ ಮನ್ ಕೀ ಬಾತ್ ಅದರೆ ಕಾಂಗ್ರೆಸ್‍ನದ್ದು ಕಾಮ್ ಕೀ ಬಾತ್ ಆಗಿರಬೇಕೆಂದರು.
ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯರು ಹುಟ್ಟುವ ಮೊದಲೇ ವಿವಿಧ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನೀಡಿದೆ. ಪಕ್ಷ ಮೊದಲು ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ. ಪ್ರತಿಯೊಬ್ಬ ಕಾರ್ಯಕರ್ತ ಇದನ್ನರಿತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಉಸ್ತುವಾರಿ ಮಧುಯಾಸ್ಕಿಗೋಡ್ ಸಭೆ ಉದ್ಘಾಟಿಸಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಚಂದ್ರಭೂಪಾಲ, ಜಿಲ್ಲಾ ಉಪಾಧ್ಯಕ್ಷ ಹೆಚ್. ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ. ಶಿವಾನಂದಪ್ಪ, ಚೌಟಿ ಚಂದ್ರಶೇಖರ ಪಾಟೀಲ್, ಮಹಿಳಾ ಅಧ್ಯಕ್ಷೆ ಸುಮಾ ಗಜಾನನ, ಪ್ರಮುಖರಾದ ಪಲ್ಲವಿ, ಆಗಾಖಾನ್, ಕಲಗೋಡು ರತ್ನಕರ, ಲಕ್ಷ್ಮೀಕಾಂತ್ ಚಿಮಣೂರು, ಕೆ. ಮಂಜುನಾಥ್, ಬಾಸೂರು ಚಂದ್ರೇಗೌಡ, ಸುಜಾಯತ್‍ಉಲ್ಲಾ, ನಾಗರಾಜ ಚಿಕ್ಕಸವಿ, ರಶೀದ್ ಚಿಕ್ಕೌಂಶಿ, ಅಹಮದ್ ಶರೀಫ್, ಝುಲ್ಫೀಕರ್, ಕರುಣಾಕರ, ರಾಮಲಿಂಗಯ್ಯ, ಜಿ. ಕೆರಿಯಪ್ಪ ಮತ್ತಿತರರು ಇದ್ದರು.







