ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಐಎನ್‌ಎಸ್ ಕಿಲ್ಟನ್ ಯುದ್ಧನೌಕೆ ದೇಶಕ್ಕೆ ಅರ್ಪಣೆ
ಈ ಜಲಾಂತರ್ಗಾಮಿ ವಿನಾಶಕ ಯುದ್ಧನೌಕೆಯ ವಿಶೇಷತೆಗಳು ಏನು ಗೊತ್ತೇ?

ವಿಶಾಖಪಟ್ಟಣಂ,ಅ.16: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಇಲ್ಲಿಯ ಪೂರ್ವ ನೌಕಾಪಡೆ ಕಮಾಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿನಾಶಕ ಯುದ್ಧನೌಕೆ ಐಎನ್‌ಎಸ್ ಕಿಲ್ಟನ್ ಅನ್ನು ದೇಶಕ್ಕೆ ಸಮರ್ಪಿಸಿದರು.
ಐಎನ್‌ಎಸ್ ಕಿಲ್ಟನ್ ಶಿವಾಲಿಕ್ ಮತ್ತು ಕೋಲ್ಕತಾ ವರ್ಗಗಳು ಮತ್ತು ತನ್ನದೇ ಕಮೋರ್ಟಾ ವರ್ಗದ ನೌಕೆಗಳ ನಂತರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸ್ವದೇಶಿ ನಿರ್ಮಿತ ಯುದ್ಧನೌಕೆಯಾಗಿದೆ. ಸಾಮಾನ್ಯ ಕಾರ್ಯಾಚರಣೆ ಚಿತ್ರಣ(ಸಿಒಪಿ)ವನ್ನು ಒದಗಿಸಲು ವಿವಿಧ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್‌ಗಳನ್ನು ಈ ನೌಕೆಯು ಹೊಂದಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.ಐಎನ್‌ಎಸ್ ಕಿಲ್ಟನ್ ಕಾರ್ಬನ್ ಫೈಬರ್ ಸಂಯುಕ್ತ ವಸ್ತುವಿನಿಂದ ನಿರ್ಮಾಣ ಗೊಂಡ ದೇಶದ ಪ್ರಥಮ ಪ್ರಮುಖ ಯುದ್ಧನೌಕೆಯಾಗಿದ್ದು, ಇದರಿಂದಾಗಿ ಸುಧಾರಿತ ರಹಸ್ಯ ಚಲನವಲನ ವೈಶಿಷ್ಟ, ಕಡಿಮೆ ತೂಕದ ಜೊತೆಗೆ ನಿರ್ವಹಣಾ ವೆಚ್ಚವೂ ಅಗ್ಗವಾಗಲಿದೆ.
ಐಎನ್‌ಎಸ್ ಕಿಲ್ಟನ್ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲಿದೆ ಮತ್ತು ಸಂಪೂರ್ಣವಾಗಿ ದೇಶದಲ್ಲಿಯೇ ನಿರ್ಮಾಣಗೊಂಡಿರುವುದರಿಂದ ನಮ್ಮ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ಉಜ್ವಲ ರಕ್ಷಾಕವಚವಾಗಿದೆ ಎಂದು ಸೀತಾರಾಮನ್ ನುಡಿದರು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ ಲಾಂಬಾ, ಪೂರ್ವ ನೌಕಾಪಡೆ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್ ಎಚ್.ಎಸ್.ಬಿಷ್ತ ಮತ್ತು ಇತರ ಹಿರಿಯ ಅಧಿಕಾರಿಗಳು ಇಲ್ಲಿಯ ನೌಕಾಪಡೆ ಹಡಗುಕಟ್ಟೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ನೌಕಾಪಡೆಯ ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ ತನ್ನ ಪ್ರಾಜೆಕ್ಟ್ 28 (ಕಮೋರ್ಟಾ ವರ್ಗ)ರಡಿ ಈ ನೌಕೆಯನ್ನು ವಿನ್ಯಾಸಗೊಳಿಸಿದೆ.
ಐಎನ್‌ಎಸ್ ಕಿಲ್ಟನ್ ಪ್ರಾಯೋಗಿಕ ಯೋಜನೆಯ ರೂಪದಲ್ಲಿ ಸಮುದ್ರದಲ್ಲಿ ಎಲ್ಲ ಪ್ರಮುಖ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್‌ಗಳ ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿರುವ ಮೊದಲ ಯುದ್ಧನೌಕೆಯೂ ಆಗಿದ್ದು, ನೌಕಾಪಡೆಗೆ ಸೇರ್ಪಡೆಗೊಂಡ ದಿನವೇ ಕಾರ್ಯಾಚರಣೆಗೆ ನಿಯೋಜನೆಗೊಳ್ಳಲು ಸನ್ನದ್ಧವಾಗಿದೆ.
ಭವಿಷ್ಯದಲ್ಲಿ ಈ ಯುದ್ಧನೌಕೆಗೆ ಅಲ್ಪವ್ಯಾಪ್ತಿಯ, ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆನ್ನು ಅಳವಡಿಸಲಾಗುವುದು ಮತ್ತು ಎಎಸ್‌ಡಬ್ಲೂ ಹೆಲಿಕಾಪ್ಟ್‌ರನ್ನು ಹೊಂದಿರಲಿದೆ.
ಇದು ಪ್ರಾಜೆಕ್ಟ್ 28ರಡಿ ನಿರ್ಮಾಣದ ನಾಲ್ಕು ಕಮೋರ್ಟಾ ವರ್ಗದ ಯುದ್ಧನೌಕೆಗಳ ಪೈಕಿ ಮೂರನೇಯದಾಗಿದೆ.
*ತೂಕ 3000 ಟನ್
*ಉದ್ದ 109 ಮೀ.
*ಅಗಲ 14 ಮೀ.
*ಗರಿಷ್ಠ ವೇಗ ಪ್ರತಿ ಗಂಟೆಗೆ 25 ನಾಟ್(46 ಕಿ.ಮೀ.)
*ಸಿಬ್ಬಂದಿಗಳ ಸಂಖ್ಯೆ 127(17 ಅಧಿಕಾರಿಗಳು ಸೇರಿದಂತೆ)
ಐಎನ್‌ಎಸ್ ಕಿಲ್ಟನ್‌ನಲ್ಲಿ ಏನೇನಿವೆ?
*ಹೆವ್ಹಿವೇಟ್ ಟಾರ್ಪೆಡೋಗಳು
*ಎಎಸ್‌ಡಬ್ಲೂ ರಾಕೆಟ್‌ಗಳು
*76 ಎಂಎಂ ಮಧ್ಯಮ ವ್ಯಾಪ್ತಿಯ ಗನ್
*ಎರಡು ಮಲ್ಟಿಬ್ಯಾರಲ್ 30 ಎಂಎಂ ಗನ್‌ಗಳು
*ಸುಸಜ್ಜಿತ ಬೆಂಕಿ ನಿಯಂತ್ರಣ ವ್ಯವಸ್ಥೆ
*ಮಿಸೈಲ್ ಡಿಕಾಯ್ ರಾಕೆಟ್‌ಗಳು
*ಅತ್ಯಾಧುನಿಕ ವಿದ್ಯುನ್ಮಾನ ಬೆಂಬಲಿತ ಮಾಪನ ವ್ಯವಸ್ಥೆ
*ಅತ್ಯಂತ ಸುಧಾರಿತ ಬೋ-ವೌಂಟೆಡ್ ಸೋನಾರ್
*ವಾಯು ಸರ್ವೇಕ್ಷಣೆಗಾಗಿ ‘ರೇವತಿ’ ರಾಡಾರ್
► ಲಕ್ಷದ್ವೀಪ ಮತ್ತು ಮಿನಿಕಾಯ್ ದ್ವೀಪಸಮೂಹಗಳ ಅಮಿನಿದಿವಿ ದ್ವೀಪಗುಂಪಿನ ನಡುಗಡ್ಡೆಯೊಂದರ ಹೆಸರನ್ನು ಈ ನೌಕೆಗೆ ಇಡಲಾಗಿದೆ.
► 1971ರ ಭಾರತ-ಪಾಕ್ ಯುದ್ಧದ ಸಂದರ್ಭ ‘ಆಪರೇಷನ್ ಟ್ರೈಡೆಂಟ್’ನಲ್ಲಿ ಟಾಸ್ಕ್‌ಪೋರ್ಸ್ ಕಮಾಂಡರ್ ಆಗಿ ಪಾಲ್ಗೊಂಡಿದ್ದ, ರಷ್ಯಾ ನಿರ್ಮಿತ ಅಂದಿನ ಪೆಟ್ಯಾ ವರ್ಗದ ತನ್ನದೇ ಹೆಸರಿನ ‘ಕಿಲ್ಟನ್(ಪಿ79)’ ಯುದ್ಧನೌಕೆಯ ಹೆಮ್ಮೆಯ ಪರಂಪರೆಯನ್ನು ಈ ನೌಕೆಯು ಹೊಂದಿದೆ.







