ದಾವಣಗೆರೆ: ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ; ಮೂವರ ಬಂಧನ
ಬಂಧಿತರಿಂದ ಅತ್ಯಾಧುನಿಕ ಮೈಕ್ರೋ ಇಯರ್ ಫೋನ್ ಬಳಕೆ

►ಅಪರ ಜಿಲ್ಲಾಧಿಕಾರಿಯಿಂದ ಕಾರ್ಯಾಚರಣೆ
►ನೂತನ್ ಕಾಲೇಜು, ಮಿಲ್ಲತ್ ಶಾಲೆಯಲ್ಲಿ ಘಟನೆ
►20ಕ್ಕೂ ಹೆಚ್ಚಿನ ಮಂದಿ ಭಾಗಿಯಾಗಿರುವ ಶಂಕೆ
ದಾವಣಗೆರೆ, ಅ.16: ಕಿವಿಗೆ ಮೈಕ್ರೋ ಇಯರ್ ಪೋನ್ ಹಾಕಿಕೊಂಡು ಕೆಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದ ಮೂವರನ್ನು ಅಪರ ಜಿಲ್ಲಾಧಿಕಾರಿ ನೇತೃತ್ವದ ತಂಡ ಸೋಮವಾರ ಹಿಡಿದಿದ್ದಾರೆ.ಬಂಧಿತರನ್ನು ಸುಭಾಸ್, ಶ್ರೀನಿವಾಸ್, ಆರ್. ತಿಪ್ಪೇಶ್ ನಾಯ್ಕ ಎಂದು ತಿಳಿದು ಬಂದಿದೆ.
ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗಳ ಖಾಲಿ ಇರುವ ಗ್ರೂಪ್ ಸಿ ವೃಂದದ ವಿವಿಧ ಹುದ್ದೆಗಳಿಗೆ ಅ.13ರಿಂದ ಆರಂಭಗೊಂಡ ನೇಮಕಾತಿ ಪರೀಕ್ಷೆಗಳು ಅ.16ರವರೆಗೆ ಜಿಲ್ಲೆಯ 39 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 14 796 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದರು.
ಅದರಂತೆ ಸೋಮವಾರ ದಾವಣಗೆರೆಯ ನೂತನ್ ಕಾಲೇಜು ಮತ್ತು ಮಿಲ್ಲತ್ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿತ್ತು. ನೂತನ್ ಕಾಲೇಜ್‌ನಲ್ಲಿ ಸುಭಾಸ್ ಮತ್ತು ಶ್ರೀನಿವಾಸ್ ಹಾಗೂ ಮಿಲ್ಲತ್ ಶಾಲೆಯಲ್ಲಿ ತಿಪ್ಪೇಶ್ ನಾಯ್ಕಿ ಪರೀಕ್ಷೆ ಬರೆಯುತ್ತಿದ್ದರು.
ಈ ವೇಳೆ ಏಕಾಏಕಿ ಪರೀಕ್ಷಾ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪನೇತೃತ್ವದಲ್ಲಿ ದಾಳಿ ನಡೆಸಿದಾಗ ಆರೋಪಿಗಳು ಅತ್ಯಾಧುನಿಕ ಮೈಕ್ರೋ ಇಯರ್ ಫೋನ್‌ಗಳನ್ನು ಕಿವಿಯಲ್ಲಿ ಇಟ್ಟುಕೊಂಡು ಪರೀಕ್ಷೆ ಬರೆಯುತ್ತಿದ್ದು ಬೆಳಕಿಗೆ ಬಂದಿದೆ.
ಬಳಿಕ ಎಲ್ಲರನ್ನೂ ತೀವ್ರ ತಪಸಣೆಗೆ ಒಳಪಡಿಸಿದಾಗ ಆರೋಪಿಗಳು ಅತ್ಯಾಧುನಿಕ ಮೈಕ್ರೋ ಇಯರ್ ಪೋನ್‌ಗಳಿಗೆ ತಾವು ತೊಟ್ಟಿದ್ದ ಕಪ್ಪು ಬಣ್ಣದ ಬನಿಯನ್‌ನಲ್ಲಿ ಅಳವಡಿಸಿದ್ದ ಮೊಬೈಲ್ ಮಾಡರಿಯ ಉಪಕರಣದಿಂದ ಉತ್ತರಗಳನ್ನು ಕೇಳಿಸಿಕೊಂಡು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.









