ಮೈಸೂರು ; ಡಿಸೆಂಬರ್ ತಿಂಗಳಲ್ಲಿ 5000 ನಿವೇಶನಗಳ ಹಂಚಿಕೆ : ಸಿದ್ದರಾಮಯ್ಯ

ಮೈಸೂರು,ಅ.16: ಸಾವರ್ಜಜನಿಕರ ಹಿತ ದೃಷ್ಟಿಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಂದಿನ ಡಿಸೆಂಬರ್ ತಿಂಗಳಾಂತ್ಯದೊಳಗೆ ಇನ್ನೂ 5,000 ನಿವೇಶನಗಳ ಹಂಚಿಕೆಗೆ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮುಡಾ ವತಿಯಿಂದ ಸೋಮವಾರ ಆಯೋಜಿಸಿದ್ದ ರವೀಂದ್ರನಾಥ ಠಾಗೋರ್ ನಗರ(ಆರ್.ಟಿ.ನಗರ) ಬಡಾವಣೆಯ ನಿವೇಶನಗಳ ಸಂಖ್ಯೆಯನ್ನು ಫಲಾನುಭವಿಗಳಿಗೆ ಲಾಟರಿ ಮೂಲಕ ನಿಗದಿಪಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಲವರಿಗೆ ಸಾಂಕೇತಿಕವಾಗಿ ನಿವೇಶನ ಸಂಖ್ಯೆಯ ಪತ್ರವನ್ನು ವಿತರಿಸಿದ ನಂತರ ಮಾತನಾಡಿದ ಅವರು, ಲಲಿತಾದ್ರಿಪುರದಲ್ಲಿ ಈಗಾಗಲೇ ನಿಗದಿಯಾಗಿರುವ 800 ನಿವೇಶನಗಳು ಸೇರಿದಂತೆ ನಗರದ ಇನ್ನು 2-3 ಸ್ಥಳಗಳಲ್ಲಿ ನಿವೇಶನ ಗುರುತಿಸುವಂತೆ ಮುಡಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಗುಂಪು ಮನೆಗಳನ್ನು ನಿರ್ಮಿಸುವ ಆಲೋಚನೆಯೂ ಇದೆ ಎಂದು ಹೇಳಿದರು.
ಪ್ರಸ್ತುತ ಆರ್.ಟಿ.ನಗರದಲ್ಲಿ 2270 ನಿವೇಶನಗಳನ್ನು 45.30 ಕೋಟಿ ರೂ. ವೆಚ್ಚದಲ್ಲಿ ರಚಿಸಿದ್ದು, ಅದರಲ್ಲಿ ಮೂಲೆ ನಿವೇಶನ, ವಾಣಿಜ್ಯ ನಿವೇಶನ, ಮೂಲಸೌಕರ್ಯ ನಿವೇಶನಗಳನ್ನು ಹೊರತುಪಡಿಸಿ ಉಳಿದ 1683 ನಿವೇಶನಗಳನ್ನು ಅರ್ಜಿ ಸಲ್ಲಿಕೆಯ ಹಿರಿತನದ ಆಧಾರದ ಮೇಲೆ ಮಂಜೂರು ಮಾಡಲಾಗಿದೆ. ಅದರಿಂದ ನ್ಯಾಯಯುತವಾಗಿ ಹಂಚಿಕೆ ಮಾಡುವುದು ಸಾಧ್ಯವಾಗಿದೆ ಎಂದರು.
ಮುಡಾದಿಂದ ಸುಮಾರು 15 ವರ್ಷಗಳ ನಂತರ ನಿವೇಶನ ಹಂಚಿಕೆ ಮಾಡಲಾಗಿದೆ. ಬಹುಶಃ ಡಿ.ಧ್ರುವಕುಮಾರ್ ಮುಡಾ ಅಧ್ಯಕ್ಷರಾಗದಿದ್ದರೆ ಇದು ಸದ್ಯಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಬಡಾವಣೆಯಲ್ಲಿ ನಾಲ್ಕು ವರ್ಗಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. 20*30, 30*40, ಶ40*60 ಮತ್ತು 50*80 ಅಳತೆಯ ನಿವೇಶನಗಳನ್ನು ವಿತರಿಸಲಾಗಿದೆ. ಮುಡಾದವರು ಬಡಾವಣೆಗಳನ್ನು ನಗರಪಾಲಿಕೆಗೆ ವರ್ಗಾವಣೆ ಮಾಡುವ ಮುಂಚೆ ನೀರು, ವಿದ್ಯುತ್, ಒಳಚರಂಡಿ, ರಸ್ತೆ ಸೌಲಭ್ಯಗಳನ್ನು ಕಲ್ಪಿಸಬೇಕು. ಏಕೆಂದರೆ ನಗರಪಾಲಿಕೆಗೆ ಹಸ್ತಾಂತರವಾದ ಕೂಡಲೇ ಅವರು ನಿವೇಶನದಾರರಿಂದ ತೆರಿಗೆ ಸಂಗ್ರಹಿಸಲು ಮುಂದಾಗುತ್ತಾರೆ. ಅದು ನ್ಯಾಯ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಭೂಮಿ ನೀಡಿದ ಹಳ್ಳಿಗಳ ಅಭಿವೃದ್ಧಿ: ಬಡಾವಣೆ ರಚನೆಗಾಗಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದ ನಂತರ ಸಂಬಂಧಪಟ್ಟ ಆ ಹಳ್ಳಿಗಳನ್ನು ಮುಡಾದ ಹಣದಿಂದಲೇ ಅಭಿವೃದ್ಧಿಪಡಿಸಬೇಕು. ಅಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ರೈತರು ಮಧ್ಯವರ್ತಿಗಳ ಹಾವಳಿಗೆ ಸಿಲುಕದಂತೆ ಎಚ್ಚರವಹಿಸಬೇಕು. ಹಿಂದೆಯೇ ನಾನು ಈ ಬಗ್ಗೆ ಆದೇಶ ನೀಡಿದ್ದು, ಹಾಗಾಗಿ ಹಿನಕಲ್‍ನಿಂದ ಆರಂಭವಾಗಿ ಒಟ್ಟು 58 ಹಳ್ಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.
ಆರ್.ಟಿ.ನಗರದಲ್ಲಿ ನಿವೇಶನ ಪಡೆದಿರುವವರು ಅತಿ ಶೀಘ್ರದಲ್ಲಿ ಮನೆಗಳನ್ನು ಕಟ್ಟಿಕೊಂಡು ಇಲ್ಲೇ ನೆಲೆಸಬೇಕು. ಇಲ್ಲದಿದ್ದರೆ ನಿವೇಶನಗಳನ್ನು ವಾಪಸ್ ಪಡೆಯುವ ಸಂಭವ ಇದೆ ಎಂದು ಅವರು ಎಚ್ಚರಿಸಿದರು.
ರಾಜ್ಯ ಸರ್ಕಾರದ ವತಿಯಿಂದ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅನೇಕ ರಸ್ತೆಗಳ ಕಾಮಗಾರಿ, ಜಯದೇವ ಆಸ್ಪತ್ರೆ, ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡಗಳ ನವೀಕರಣಕ್ಕೆ ಹಣ ನೀಡಲಾಗಿದೆ. ಮಹಾರಾಣಿ ಕಾಲೇಜಿಗೆ ನೂತನ ಕಟ್ಟಡ, ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯ, ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಇತ್ಯಾದಿ ಹೊಸ ಯೋಜನೆಗಳು ಪೂರ್ಣಗೊಳ್ಳಲಿದ್ದು, ಅತಿ ಶೀಘ್ರದಲ್ಲಿ ಅವುಗಳ ಉದ್ಘಾಟನೆಯಾಗಲಿವೆ. ಚಾಮುಂಡಿಬೆಟ್ಟದ ಪ್ರಗತಿಗೂ ಪ್ರಯತ್ನ ಮಾಡಲಾಗಿದೆ ಎಂದು ಸಿದ್ದರಾಮಯ್ಯ ನುಡಿದರು.
ಚುನಾವಣಾ ರಾಜಕೀಯ ಆದಿಯೂ ಇಲ್ಲೇ ಅಂತ್ಯವೂ ಇಲ್ಲೆ!
ನನ್ನ ಚುನಾವಣಾ ರಾಜಕೀಯ ಆರಂಭವಾಗಿದ್ದೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ, ಇಲ್ಲಿ 5 ಬಾರಿ ಗೆಲುವು ಸಾಧಿಸಿದ್ದೇನೆ. ಕೊನೆಯ ಚುನಾವಣೆಯೂ ಇಲ್ಲೇ ಆಗಲಿ ಎಂಬ ಭಾವನಾತ್ಮಕ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲೇ ಈ ಕ್ಷೇತ್ರದಿಂದಲೇ ಸ್ಪರ್ಧಿಸಲು ತೀರ್ಮಾನ ಮಾಡಿಬಿಟ್ಟಿದ್ದೇನೆ. ಹಾಗಾಗಿ ಜನರು ನಮಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ರೆವಿನ್ಯೂ ಬಡಾವಣೆಗೆ ತಡೆಹಾಕಿ: ಖಾಸಗಿ ರೆವಿನ್ಯೂ ಬಡಾವಣೆ ರಚನೆಕಾರರು ಬಹುತೇಕ ಜನರನ್ನು ವಂಚಿಸುತ್ತಾರೆ. ಮುಡಾ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿವೇಶನ ರಹಿತರು, ಬಡವರು, ಆರ್ಥಿಕ ದುರ್ಬಲರು, ಮಧ್ಯಮ ವರ್ಗದವರಿಗೆ ನಿವೇಶನ ಸಿಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಮೈತ್ರಿ ಸೇರಿದಂತೆ ಬಹುತೇಕ ಎಲ್ಲ ವರ್ಗದ ಜನರಿಗೂ ಅನುಕೂಲಕರವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ ರಾಜ್ಯದಲ್ಲಿರುವ 10 ಲಕ್ಷ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ಮಾತೃಪೂರ್ಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ನ.15ರಿಂದ ಎಲ್ಲರಿಗೂ ಆರೋಗ್ಯ ಒದಗಿಸುವ ಯೋಜನೆ ಕೂಡ ಜಾರಿಯಾಗಲಿದೆ ಎಂದು ವಿವರಿಸಿದರು. ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಪಡಿಮಾರ್ ತಂಡ ನಾಡಗೀತೆ ಹಾಡಿದರು.
ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಸಕ ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ವರುಣ ವಿಧಾನಸಭಾ ಕ್ಷೇತ್ರ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದಕುಮಾರ್, ಕರ್ನಾಟಕ ಭೋವಿ ಅಭಿವೃದ್ಧಿ ನಿಮಗದ ಅಧ್ಯಕ್ಷ ಜಿ.ವಿ.ಸೀತಾರಾಮು, ಮುಡಾ ಸದಸ್ಯರಾದ ಎಸ್.ಸತೀಶ್(ಸಂದೇಶ್ ಸ್ವಾಮಿ), ಶಿವಮಲ್ಲು, ಜಿಲ್ಲಾಧಿಕಾರಿ ಡಿ.ರಂದೀಪ್, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ರಾಕೇಶ್ ಪಾಪಣ್ಣ, ಮಾಜಿ ಅಧ್ಯಕ್ಷ ಕೆ.ಮರಿಗೌಡ, ನಗರಪಾಲಿಕೆ ಆಯುಕ್ತ ಜಿ.ಜಗದೀಶ್, ಸದಸ್ಯೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮಹಾಪೌರ ಟಿ.ಬಿ.ಚಿಕ್ಕಣ್ಣ, ಮಾಜಿ ಶಾಸಕ ಸತ್ಯನಾರಾಯಣ, ಕೇಂದ್ರ ಪರಿಹಾರ ಸವಿತಿ ಮಾಜಿ ಅಧ್ಯಕ್ಷ ಸಿ.ಎನ್.ಮಂಜೇಗೌಡ, ಮುಡಾ ಮಾಜಿ ಸದಸ್ಯ ಭಾಸ್ಕರ್ ಎಲ್.ಗೌಡ, ಕಾಂಗ್ರೆಸ್ ಮುಖಂಡರಾದ ಮಂಜುಳ ಮಾನಸ, ಕೋಟೆಹುಂಡಿ ಮಹದೇವ್, ಗೋಪಾಲರಾಜು ಮುಂತಾದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







