ಬಿ.ಜೆ.ಪುಟ್ಟಸ್ವಾಮಿ ಆರೋಪ ಸಾಬೀತು ಪಡಿಸಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಲಿ: ಸಿಎಂ

ಮೈಸೂರು,ಅ.16: ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ನನ್ನ ಮೇಲೆ ಮಾಡಿರುವ ಸುಳ್ಳು ಆರೋಪವನ್ನು ಸಾಬೀತು ಪಡಿಸಲಿ ನಂತರ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದ ಟಿ.ಕೆ.ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧದ ಆರೋಪ ಸುಳ್ಳಾದರೇ ವಿಧಾನಸೌಧ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಬಿ.ಜೆ ಪುಟ್ಟಸ್ವಾಮಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಮೊದಲು ಸುಳ್ಳು ಆರೋಪವನ್ನು ಸಾಬೀತು ಮಾಡಲಿ, ಆಮೇಲೆ ಆತ್ಮಹತ್ಯೆಗೆ ಯತ್ನಿಸಲಿ. ಯಾರೇ ಆದರೂ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಪುಟ್ಟಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ಬೆಂಗಳೂರಿನಲ್ಲಿ ಟೆಕ್ಕಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ. ಯಾರೇ ಆದರೂ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇನ್ನೂ ಕೆಎಸ್‍ಓಯು ಮುಚ್ಚುವುದಿಲ್ಲ. ಈ ಬಗ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸಚಿವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಪರಿಹಾರ ಕೊಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ನಂತರ ಮುಖ್ಯಮಂತ್ರಿಗಳನ್ನು ಭೇಟಿ ಯಾಗಲು ಆಗಮಿಸಿದ ಸಾರ್ವಜನಿಕರ ಅಹವಾಲನ್ನು ಸಿದ್ದರಾಮಯ್ಯ ಸ್ವೀಕರಿಸಿ ಅವರ ಸಮಸ್ಯೆಗಳನ್ನು ಕೇಳಿದರು.
ಮೈಸೂರಿನಲ್ಲಿ ಜ.1 ರಿಂದ ಇಂದಿರಾ ಕ್ಯಾಂಟೀನ್ ಆರಂಭ: ಸಿಎಂ
ಜ.1ರಂದು ಮೈಸೂರಿನಲ್ಲಿ 11ರಿಂದ 12 ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲಾಗುವುದು. ಮೈಸೂರಿನಲ್ಲಿ 11ರಿಂದ 12 ಲಕ್ಷ ಜನಸಂಖ್ಯೆ ಇದೆ. ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್ ತೆರೆಯಲಾಗುವುದು.
ಬೆಳಿಗ್ಗೆ ವೇಳೆ 5 ರೂ.ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ವೇಳೆ 10 ರೂ.ಗೆ ಊಟ ನೀಡಲಾಗುವುದು. ಒಂದು ಹೊತ್ತಿಗೆ 500 ಗ್ರಾಹಕರಿಗೆ ಆಹಾರ ಸಿದ್ಧಪಡಿಸಲಾಗುವುದು. ಬೆಂಗಳೂರಿನಲ್ಲಿ 200 ಕ್ಯಾಂಟೀನ್ ತೆರೆಯಲಾಗಿದ್ದು, ರಾಜ್ಯಾದ್ಯಂತ ಇನ್ನೂ 300 ಕ್ಯಾಂಟೀನ್ ಶುರು ಮಾಡಲಾಗುವುದು.
-ಸಿದ್ದರಾಮಯ್ಯ







