ಪರಿಷ್ಕೃತ ನೀಲ ನಕ್ಷೆ ಕ್ರಿಯಾ ಯೋಜನೆಯನ್ನು ಅನುಮೋದಿಸುವ ಮುನ್ನ ರಾಜ್ಯ ಸರಕಾರ ಹೈಕೋರ್ಟ್‌ನ ಅನುಮತಿ ಪಡೆಯಲು ನಿರ್ದೇಶ

ಬೆಂಗಳೂರು, ಅ.16: ಬೆಂಗಳೂರು ನಗರ ಅಭಿವೃದ್ಧಿಗೆ ಪರಿಷ್ಕೃತ ನೀಲನಕ್ಷೆ ಕ್ರಿಯಾ ಯೋಜನೆ(ಆರ್‌ಎಂಪಿ 2031)ಯನ್ನು ಅನುಮೊದಿಸುವ ಮುನ್ನ ರಾಜ್ಯ ಸರಕಾರ ಹೈಕೋರ್ಟ್‌ನ ಅನುಮತಿ ಪಡೆಯಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ನೀಲ ನಕ್ಷೆ ಕ್ರಿಯಾ ಸಮಿತಿ(ಬಿಎಂಪಿಸಿ)ಯು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಹೈಕೋರ್ಟ್ ಅನುಮತಿ ಇಲ್ಲದೆ ನೀಲ ನಕ್ಷೆ ಕ್ರಿಯಾ ಯೋಜನೆಗೆ ಅನುಮತಿ ನೀಡದಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಮನವಿ ವಾಡಿದರು.
ಈಗಾಗಲೇ ಬಿಡಿಎ ಅವರು ನೀಲನಕ್ಷೆ ಕ್ರಿಯಾ ಯೋಜನೆಯ ಅನುಮತಿಗಾಗಿ ರಾಜ್ಯ ಸರಕಾರದ ಬಳಿ ಹೋಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಹೈಕೋರ್ಟ್‌ನ ಅನುಮತಿ ಇಲ್ಲದೆ ರಾಜ್ಯ ಸರಕಾರವು ನೀಲನಕ್ಷೆ ಕ್ರಿಯಾ ಯೋಜನೆಗೆ ಅನುಮತಿ ನೀಡಬಾರದೆಂದು ಆದೇಶಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.





