ಉತ್ತಮ ಮಳೆಯಿಂದ ಈ ವರ್ಷ ರೈತಾಪಿ ವರ್ಗದವರಿಗೆ ಹರ್ಷದಾಯಕವಾಗಿದೆ : ಸಂಸದ ಧ್ರುವನಾರಾಯಣ್

ಹನೂರು,ಅ.16 : ಕಳೆದ ಎರಡು- ಮೂರು ವರ್ಷಗಳಿಂದ ಮಳೆಯಿಲ್ಲದೆ ಬೀಕರ ಬರಗಾಲದಿಂದ ಕಂಗಾಳಾಗಿದ್ದ ರೈತಾಪಿ ವರ್ಗದವರಿಗೆ ಉತ್ತಮ ಮಳೆಯಿಂದ ಈ ವರ್ಷ ಹರ್ಷದಾಯಕವಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಸಂಸದ ಧ್ರುವನಾರಾಯಣ್ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಉಡುತೊರೆಹಳ್ಳ ಜಲಾಶಯ ಮತ್ತು ಹೂಗ್ಯಂ ಜಲಾಶಯಗಳ ಕಳೆದ ಹಲವು ದಿನಗಳಿಂದ ಸುರಿದ ಧಾರಕಾರ ಮಳೆಯಿಂದಾಗಿ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದಾರಿಂದ ಇಂದು ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ವ್ಯಾಪ್ತಿಯ 8 ಜಲಾಶಯಗಳಲ್ಲಿ ಏಳು ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಗುಂಡಾಲ್ ಜಲಾಶಯ ಹೊರತು ಪಡಿಸಿ, ರಾಮನಗುಡ್ಡೆ, ಹುಬ್ಬೆ ಹುಣಸೆ ಜಲಾಶಯ, ಕೌಳಿಹಳ್ಳಿ ಡ್ಯಾಂ, ಉಡುತೊರೆ ಜಲಾಶಯ, ಹೂಗ್ಯಂ ಜಲಾಶಯ, ಗೋಪಿನಾತಂ ಜಲಾಶಯಗಳು ಧಾರಕಾರ ಮಳೆಯಿಂದ ತುಂಬಿ ಹಳ್ಳಕೊಳ್ಳಗಳು ಹರಿಯುತ್ತಿವೆ ಎಂದು ತಿಳಿಸಿದರು.
ನಂತರ ಶಾಸಕ ಆರ್.ನರೇಂದ್ರ ಮಾತನಾಡಿ ಉಡುತೊರೆ ಜಲಾಶಯ ಲೊಕ್ಕನಹಳ್ಳಿ, ಒಡೆಯರಪಾಳ್ಯ ಭಾಗದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ಜಲಾಶಯ ಪೂರ್ಣ ಪ್ರಮಾಣದಲ್ಲಿ ಮೈ ದುಂಬಿಕೊಂಡಿದೆ. ಜಲಾಶಯ ವ್ಯಾಪ್ತಿಗೆ 6217 ಎಕ್ಟರ್ ಜಲಾನಯ ಪ್ರದೇಶ ಒಳಗೊಂಡಿದೆ, ಬಸಪ್ಪನದೊಡ್ಡಿ, ಅಜ್ಜೀಪುರ, ಎಲ್ಲೇಮಾಳ, ರಾಮಾಪುರ, ಮತ್ತು ವಿವಿಧ ಗ್ರಾಮಗಳು ಒಳಪಡಲಿದೆ, ಎಡದಂಡೆ ಹಾಗೂ ಬಲದಂಡೆ ನಾಲೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಮರದಮಣಿ, ಲೇಖಾ, ಮಾಜಿ ಜಿ.ಪಂ ಸದಸ್ಯ ಶಿವಕುಮಾರ್ ತಾಲ್ಲೂಕು ಪಂಚಾಯತ್ ಅದ್ಯಕ್ಷರಾದ ರಾಜು ತಾಲ್ಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮುರುಳಿ, ಮುಖಂಡರಾದ ಕೃಷ್ಣ, ರವಿಕುಮಾರ್, ಇನ್ನಿತರರು ಹಾಜರಿದ್ದರು







