ನಗರಸಭೆ ಆಸ್ತಿ ಕಬಳಿಸಿದವರ ಮೇಲೆ ಕಠಿಣ ಕ್ರಮಕ್ಕೆ ಸೂಚನೆ

ಕೊಳ್ಳೇಗಾಲ,ಅ.16: ಸರ್ಕಾರಿ ಜಾಗವನ್ನು ಕಬಳಿಸಿ ದಾಖಲಾತಿಗಳನ್ನು ನಕಲು ಮಾಡಿ ಕಟ್ಟಡ ಕಟ್ಟಿದ್ದರೆ ಅಂತವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತರಿಗೆ ಶಾಸಕ ಎಸ್.ಜಯಣ್ಣ ಅವರು ಸೂಚಿಸಿದರು.
ಪಟ್ಟಣದ ಸಿಡಿಎಸ್ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ವ್ಯಕ್ತಿಯಾಗಿರಲಿ ಅಕ್ರಮವಾಗಿ ಸರ್ಕಾರಿ ಹಾಗೂ ನಗರಸಭೆ ಆಸ್ತಿ ಕಬಳಿಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಅಕ್ರಮಕ್ಕೆ ಸಹಕರಿಸುವ ಅಧಿಕಾರಿ ವಿರುದ್ದವು ಕ್ರಮಕೈಗೊಳ್ಳಲು ಸೂಚಿಸಿದರು.
ಆರ್‍ಎಂಸಿ ರಸ್ತೆ ಯಾವುದೇ ಕಾರಣಕ್ಕೂ 60 ಅಡಿಗಿಂತ ಕಡಿಮೆಗೊಳಿಸಲು ಸಾಧ್ಯವಿಲ್ಲ ಈಗಾಗಲೇ ಟೆಂಡರ್ ಪ್ರಿಕಯೆ ನಡೆದಿದ್ದು ಕಾಮಗಾರಿ ಆರಂಭವಾಗಿದೆ ಹಾಲಿ ವಾಸ ಇರುವ ಮನೆಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಸಕ ಜಯಣ್ಣ ತಿಳಿಸಿದರು. ಸಭೆಯಲ್ಲಿ ಸದಸ್ಯರುಗಳಾದ ಮಂಗಳಗೌರಿ ಹಾಗೂ ಅಕ್ಮಲ್‍ರವರು 50 ಅಡಿಗಳಿಗೆ ರಸ್ತೆ ಸೀಮಿತಗೊಳಿಸಬೇಕು ಎಂಬ ಬೇಡಿಕೆಯನ್ನು ಸಭೆಯಲ್ಲಿ ತಿರಸ್ಕರಿಸಲಾಯಿತು.
ಇದೇ ಸಂಧರ್ಭದಲ್ಲಿ ವಾಸವಿ ವಿದ್ಯಾಸಂಸ್ಥೆ ಹಾಗೂ ಮಾನಸ ಕಾಲೇಜು ಕಟ್ಟಡಗಳಿಗೆ ನಗರಸಭೆಯಿಂದ ರಹದಾರಿಯನ್ನು ಪದೆ ಪದೇ ಕಟ್ಟಡ ನಿರ್ಮಿಸಿದ್ದಾರೆ. ವಾಸವಿ ವಿದ್ಯಾಸಂಸ್ಥೆ ಪರಂಪೋರ್ ಜಾಗವಾಗಿದ್ದು ಅಕ್ರಮ ಕಟ್ಟವಾಗಿದೆ ಎಂದು ಸದಸ್ಯ ಎ.ಪಿ ಶಂಕರ್ ಗಮನ ಹರಿಸಿದಾಗ ಈ ಬಗ್ಗೆಯ ಪರೀಶಿಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.
ಅಂಜುಮನ್ ಇಸ್ಲಾಮಿಯ ಕಟ್ಟಡ ಹಿಂಬಾಗ 29286 ಚದರಿ ಅಡಿ ನಿವೇಶನ ನಂದಿನಿ ಹೋಟೆಲ್ ಸಮೀಪ ಇರುವ ಈಶ್ವರ ಎಂಬುವವರು 36339 ಚದರು ಅಡಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಪಶು ಆಸ್ಪತ್ರೆ ಬಳಿ ಇರುವ 10*8 ಮೀಟರ್ ಜಾಗವನ್ನು ಭಾಗ್ಯಮ್ಮ ಶಿವಲಿಂಗಯ್ಯ ಎಂಬುವವರು ಜಿ.ವಿ.ಗೌಡ ಹಾಸ್ಟೆಲ್ ಬಳಿ 5 ಸೆಂಟ್ ಜಾಗವನ್ನು ವೀಣಾ ಎಂಬುವವರುಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆಂದು ಪೌರಾಯುಕ್ತರು ಸಭೆ ಗಮನಕ್ಕೆ ತಂದಾಗ ಈ ಖಾತೆಗಳನ್ನು ರದ್ದು ಪಡಿಸಲು ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಈದ್ಗಾ ಮೋಹಾಲ್ಲಾದಲ್ಲಿ ಶವಗಾರ ಮನೆಯನ್ನು ಸಹಾ ಪರಭಾರೆ ಮಾಡಿ ಮನೆ ಕಟ್ಟಲಾಗಿದೆ ಈ ಬಗ್ಗೆಯು ತನಿಖೆ ಮಾಡಿ ಎಂದು ಸದಸ್ಯ ಎ.ಪಿ ಶಂಕರ್ ಸಭೆ ಗಮನಕ್ಕೆ ತಂದರು.
ನವೆಂಬರ್ 1 ರಿಂದ ಸರ್ಕಾರಿ ಆಸ್ಪತ್ರೆ ಎದುರು ಇರುವ ತಹಶಿಲ್ದಾರ್ ಹಳೇ ವಸತಿಗೃಹ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ 500 ಮಂದಿಗೆ ಊಟ ತಿಂಡಿ ಒದಗಿಸಲಾಗುವುದು ಎಂದು ಶಾಸಕ ಜಯಣ್ಣ ಸಭೆಯಲ್ಲಿ ತಿಳಿಸಿದರು.
9 ನೇ ವಾರ್ಡ್‍ನ ಸದಸ್ಯೆ ಲಕ್ಷ್ಮೀ ಇಂದ್ರೇಶ್‍ರವರು ಮಾತನಾಡಿ, ತನ್ನ ವಾರ್ಡಿನಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಅಲ್ಲಿನ ಭಾಗದ ಜನರು ತುಂಬಾ ತೊಂದರೆ ಉಂಟಾಗಿದೆ. ಇಬ್ಬರು ಬಿದ್ದು ಕಾಳು ಮುರಿದುಕೊಂಡಿದ್ದಾರೆ ಅನೇಕ ಬಾರಿ ಅಧಿಕಾರಿಗಳ ಗಮನಹರಿಸಿದರು ಏನು ಕ್ರಮ ಕೈಗೊಂಡಿಲ್ಲ 15 ದಿನದಲ್ಲಿ ಸರಿಪಡಿಸದೆ ಇದ್ದರೆ ನಗರಸಭೆ ಕಛೆರಿಗೆ ನಮ್ಮ ವಾರ್ಡ್ ಜನರು ಮುತ್ತಿಗೆ ಹಾಕಿ ಬೀಗ ಜಡಿಯುವ ಬೆದರಿಕೆ ಹಾಕಿದಾಗ, ಶಾಸಕರು ಕೂಡಲೇ ಕ್ರಮ ಕೈಗೊಳ್ಳಲು ಸಹಾಯಕ ಕಾರ್ಯಪಾಲಕ ಅಭಿಯಂನತರ ಗಂಗಾಧರಗೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ನಂಜುಂಡ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ನಗರಸಭೆ ಪೌರಾಯುಕ್ತ ಲಿಂಗರಾಜು, ಸದಸ್ಯರುಗಳಾದ ಮಲ್ಲಿಕಾರ್ಜುನ, ರಮೇಶ್, ರಾಮಕೃಷ್ಣ, ರಂಗಸ್ವಾಮಿ, ನರಸಿಂಹನ್, ಶಿವಾನಂದ, ರಾಘವೇಂದ್ರ, ಗಿರೀಶ್, ಕೃಷ್ಣಯ್ಯ, ನಾಗಸುಂದ್ರಮ್ಮ, ಲಾಜರೆಸ್, ಶಂಕರನಾರಾಯಣ್‍ಗುಪ್ತ, ಸುಮಾ, ಎಇಇ ಗಂಗಾಧರ್, ಪರಶಿವ, ಕಾಂತರಾಜು, ನಟರಾಜು, ಸಿದ್ದಪ್ಪ, ನಗರಸಭೆಯ ಎಲ್ಲಾ ಸದಸ್ಯರುಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.







