ದಾವಣಗೆರೆ : ಪಾಲಿಕೆ ಸಾಮಾನ್ಯ ಸಭೆ

ದಾವಣಗೆರೆ,ಅ.16: ನಗರದಲ್ಲಿ ವಾರವಾದರೂ ಕಸ ತೆಗೆಯುತ್ತಿಲ್ಲ. ಕುಡಿವ ನೀರಿನ ಕೊರತೆ ನೀಗಿಸಿಲ್ಲ. ಆದ್ದರಿಂದ ಮೊದಲು ಮೂಲಸೌಲಭ್ಯಕ್ಕೆ ಆದ್ಯತೆ ನೀಡಿ, ಆಮೇಲೆ ನೀರಿನ ಕರ ನಿಗದಿಸುವ ನಿರ್ಧಾರ ಕೈಗೊಳ್ಳಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಪಾಲಿಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಇಲ್ಲಿನ ಪಾಲಿಕೆ ಆವರಣದಲ್ಲಿ ಮೇಯರ್ ಅನಿತಾಬಾಯಿ ಮಾಲತೇಶ್ ರಾವ್ ಜಾಧವ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮುಂದಿನ 3 ವರ್ಷಗಳ ನಂತರ ವಿಧಿಸಬಹುದಾದ ನೀರಿನ ಕರಗಳ ಕುರಿತು ಚರ್ಚೆ ವೇಳೆ ನಗರದ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಶಾಮನೂರು ಶಿವಶಂಕರಪ್ಪ ನಗರದ ಯಾವುದಾದರೂ ಒಂದು ಭಾಗವಾದರೂ ಸ್ವಚ್ಛತೆಯಿಂದ ಇದೆಯೇ? ಒಂದಾದರೂ ಚರಂಡಿ ಸ್ವಚ್ಛಗೊಳಿಸಿದ್ದೀರಾ? ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಿದ್ದೀರಾ? ಎಂದು ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಬರೀ ಕಾಂಕ್ರೀಟ್ ರಸ್ತೆ, ವಿದ್ಯುತ್ ದೀಪ ಹಾಕಿಸಿದ್ದನ್ನೇ ಸಾಧನೆ ಎಂದುಕೊಳ್ಳಬೇಡಿ, ಈ ಕೂಡಲೇ ನನ್ನೊಂದಿಗೆ ಬನ್ನಿ ಹದಗೆಟ್ಟಿರುವ ನಗರ ತೋರಿಸುತ್ತೇನೆ. ಇಲ್ಲಿ ಕುಳಿತು ಕೇವಲ ಮೀಟಿಂಗ್ ಮಾಡಿದರೆ ಸಾಲದು. ನಗರದಲ್ಲಿ ಸುತ್ತಾಡಿ ನೀರು ಮತ್ತು ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಎಂದ ಅವರು, ಮೊದಲು ಜನರಿಗೆ ಸರಿಯಾಗಿ ನೀರು ಕೊಡಿ ನಂತರ ನೀರಿನ ತೆರಿಗೆ ಹೆಚ್ಚಳ ಸಂಬಂಧ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳಿಂದ ನಗರದ ಸರ್ಕಾರಿ ಜಮೀನಿನಲ್ಲಿ ಪಕ್ಕ ಮನೆ ನಿರ್ಮಿಸಿಕೊಂಡಿರುವವರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ಕೊಡಲು ನಿರ್ಧರಿಸಿದ್ದಾರೆ. ಆದರೆ, ಆಶ್ರಯ ಶಾಖೆಯ ಗೋವಿಂದ ನಾಯ್ಕ ಒಂದು ಹಕ್ಕುಪತ್ರ ಕೊಡಲು ಮೂರು ತಿಂಗಳು ಅಲೆದಾಡಿಸಿದ್ದಾರೆ. ಹೀಗಾದರೆ, 4 ಸಾವಿರ ಹಕ್ಕುಪತ್ರ ವಿತರಿಸಲು ಇನ್ನೇಷ್ಟು ದಿನಬೇಕು? ಕೆಲ ಮಧ್ಯವರ್ತಿಗಳು ಹಕ್ಕುಪತ್ರಕ್ಕೆ ಹಣ ಪಡೆಯುತ್ತಿದ್ದಾರೆ. ಪಾಲಿಕೆ ಹಕ್ಕುಪತ್ರ ನೀಡಲು ಶುಲ್ಕ ನಿಗದಿ ಮಾಡಿದೆಯೇ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ನಾರಾಯಣಪ್ಪ, ಇನ್ನೂ 15ರಿಂದ 30 ದಿನಗಳಲ್ಲಿ ಹಕ್ಕುಪತ್ರ ನಮ್ಮ ಕೈ ಸೇರಲಿದ್ದು, ಇವುಗಳ ವಿತರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಹಕ್ಕುಪತ್ರ ವಿತರಣೆಗೆ ಯಾವುದೇ ಶುಲ್ಕ ನಿಗದಿ ಮಾಡಿಲ್ಲ. ನಮ್ಮ ಬಳಿ ಇಂತಹವರೇ ಹಕ್ಕುಪತ್ರ ಕೊಡಿಸಲು ಹಣ ಕೇಳಿದ್ದಾರೆ ಎಂಬುದಾಗಿ ದೂರು ನೀಡಲು ಯಾರಾದರು ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವನಹಳ್ಳಿ ರಮೇಶ್ ಮಾತನಾಡಿ, 55ರಲ್ಲಿ ನಿರ್ಮಾಣವಾಗಿದ್ದ ದಾವಣಗೆರೆ ನಗರಸಭೆಯ ಕಡತಗಳು, ದಾಖಲೆಗಳು ಧೂಳು ಹಿಡಿಯುತ್ತಿದ್ದು, ಕೆಲವರು ಅವುಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಪಾಲಿಕೆ ದಾಖಲೆ ಗಣಕೀಕೃತಗೊಳಿಸಬೇಕು. ಇದು ಸಾಧ್ಯವಾಗದಿದ್ದರೆ, ದಾಖಲೆ ಸ್ಕ್ಯಾನ್ ಮಾಡಿ ಇಡಬೇಕೆಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ದಾಖಲೆ ಗಣಕೀಕೃತಗೊಳಿಸಲು ಸರ್ಕಾರ ನಮಗೆ ಆದೇಶ ನೀಡಿಲ್ಲ. ದಾವಣಗೆರೆ ಸೇರಿದಂತೆ 10 ಪಾಲಿಕೆಗಳನ್ನು ಗಣಕೀಕೃತಗೊಳಿಸಲು ಸರ್ಕಾರ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಿದರು.
ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ಟವರ್ ಅಳವಡಿಸಲು ಇನ್ಮೂಂದೆ ಮಹಾನಗರ ಪಾಲಿಕೆ ಅವಕಾಶ ನೀಡಬಾರದು. ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ಟವರ್ ಅಳವಡಿಕಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಟವರ್ ಅಳವಡಿಸಲು ಅವಕಾಶ ನೀಡಬಾರದು ಎಂದು ಹೇಳಿದರು.
ಪಾಲಿಕೆ ಸದಸ್ಯ ಆವರಗೆರೆ ಉಮೇಶ್ ಮಾತನಾಡಿ, ನಗರದಲ್ಲಿ ಎಷ್ಟು ಟವರ್‍ಗಳಿವೆ. ಅವುಗಳಿಂದ ಎಷ್ಟು ಅನುದಾನ ಬರುತ್ತಿದೆ. ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಹೇಳಿದರು. ಇದಕ್ಕೆ ಉತ್ತರಿಸಿದ ಆಯುಕ್ತ ನಾರಾಯಣಪ್ಪ, ಈವರೆಗೂ ಯಾವುದೇ ಕಂದಾಯ ವಸೂಲಿ ಮಾಡಿಲ್ಲ. ಇನ್ನೂ ಮುಂದೆ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಮಳೆಯಿಂದ ಹಾನಿ ಸಂಭವಿಸಿ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಪರಿಹಾರ ನೀಡಲು ಖಾತೆ, ಡೋರ್ ನಂಬರ್ ಕೇಳುವುದು ಸರಿಯಲ್ಲ. ಕೆಲವರಿ ಬಳಿ ದಾಖಲೆಗಳೇ ಇಲ್ಲ. ಆದ್ದರಿಂದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಹಜರ್ ನಡೆಸಿ, ಎಲ್ಲ ನಿರಾಶ್ರಿತರಿಗೂ ಪರಿಹಾರ ವಿತರಿಸಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ಮೇಯರ್ ಅನಿತಾಬಾಯಿ, ಉಪ ಮೇಯರ್ ಮಂಜಮ್ಮ ಹನುಮಂತಪ್ಪ ಮತ್ತಿತರರು ಹಾಜರಿದ್ದರು.
ಸಭೆಯಿಂದ ಹೊರನಡೆದ ಬಿಜೆಪಿ ಸದಸ್ಯ ಕುಮಾರ್
ಪಾಲಿಕೆ ಸಾಮಾನ್ಯ ಸಭೆಯಲ್ಲಿ ತನ್ನ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ತನ್ನ ವಾರ್ಡ್‍ಗೆ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಕುರಿತು ಸಾಮಾನ್ಯ ಸಭೆಯಲ್ಲಿ ನಮ್ಮ ಸಮಸ್ಯೆ ಹೇಳಿದರೇ ಯಾರೂ ಕೇಳುವವರಿಲ್ಲ ಎಂದು ಪಾಲಿಕೆಯ ಏಕೈಕ ಬಿಜೆಪಿ ಸದಸ್ಯ ಬಿ. ಕುಮಾರ್ ಸಭೆಯಿಂದ ಹೊರನಡೆವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.







