ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ದಾವಣಗೆರೆ,ಅ.16:ನರೇಂದ್ರ ಮೋದಿ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿರುವುದನ್ನು ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಇಲ್ಲಿನ ಪಾಲಿಕೆ ಮುಂಭಾಗದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ಸಿಗರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಪಕ್ಷದ ಮುಖಂಡರು, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಜನತೆಗೆ ಬೆಲೆ ಏರಿಕೆಯ ಬರೆ ಹಾಕುವ ಮೂಲಕ ಜನ ವಿರೋಧಿ ನೀತಿ ತನ್ನದಾಗಿಸಿಕೊಂಡಿದೆ. ನೋಟು ಅಮಾನ್ಯದಿಂದ ಆದ ತೊಂದರೆಗಳಿಂದ ಜನತೆ ಇಂದಿಗೂ ಹೊರ ಬಂದಿಲ್ಲ ಎಂದು ಅವರು ದೂರಿದರು.
ಪ್ರಧಾನಿ ಮೋದಿ ಪರಮಾಪ್ತರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜೈ ಶಾ ಅಕ್ರಮ ಸಂಪಾದನೆ ಮಾಡಿ, ಕೆಲವೇ ದಿನಗಳಲ್ಲಿ ನೂರಾರು ಕೋಟಿ ಹಣ ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ. ಕೆಲ ದಿನಗಳಲ್ಲೇ ಇಷ್ಟೊಂದು ಗಳಿಕೆ ಹೇಗೆ ಸಾಧ್ಯವೆಂಬುದಕ್ಕೆ ಪ್ರಧಾನಿ ಮೋದಿಉತ್ತರಿಸಲಿ ಎಂದು ಆಗ್ರಹಿಸಿದ ಅವರು, ಅಮಿತ್ ಶಾ ಪುತ್ರ ಜೈ ಶಾ ಗಳಿಸಿರುವ ಆಸ್ತಿ ಕುರಿತಂತೆ ಆದಾಯ ತೆರಿಗೆ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ, ಜನ ಪರ ಆಡಳಿತ ನೀಡುತ್ತೇವೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಬಿಜೆಪಿ ನಾಯಕರ ನಿಜ ಬಣ್ಣ ಬಯಲಾಗಲಿ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ಯುವ ಮುಖಂಡರಾದ ದಿನೇಶ ಕೆ. ಶೆಟ್ಟಿ, ಬಿಸ್ತುವಳ್ಳಿ ಬಾಬು, ಡಿ. ಮಾಲತೇಶ, ಎ. ನಾಗರಾಜ, ಎಚ್.ಆರ್. ಪ್ರವೀಣ, ಮೈನುದ್ದೀನ್, ಕೆ.ಜಿ. ಶಿವಕುಮಾರ, ಎಲ್.ಎಚ್. ಸಾಗರ್, ಸಾಹುಕಾರ್, ಮಂಜಪ್ಪ, ಮಹಮ್ಮದ್ ಜಾವೀರ್, ಮಹಮ್ಮದ್ ಖಾಲಿದ್ ಪೈಲ್ವಾನ್, ರೋಷನ್ ಜಮೀರ್, ನಾಗರಾಜ, ಪ್ರವೀಣಕುಮಾರ, ಜಮೀರಾ ಬಾನು, ಸುಬಾನ್ ಸಾಬ್, ಸಾದಿಕ್, ಸೈಯದ್ ಮುಸ್ತಫ್, ನಾವೀದ್, ಜಬೀ, ಸಂತೋಷ, ನೂರ್ ಅಹಮ್ಮದ್, ಇಮ್ರಾನ್ ಇದ್ದರು.







