ದಾವಣಗೆರೆ :ವಿಶ್ವ ಆಹಾರ ದಿನಾಚರಣೆ

ದಾವಣಗೆರೆ,ಅ.16:ವಿಶ್ವದಲ್ಲಿಯೇ ಶೇ. 43ರಷ್ಟು ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಆದರೆ ಅವರನ್ನು ಮುಂಚೂಣಿಗೆ ಬರುವುದಕ್ಕೆ ಬಿಡುತ್ತಿಲ್ಲ ಎಂದು ತರಳಬಾಳು ಕೃಷಿ ವಿಜ್ಞಾನ ಕಏಂದ್ರ ವಿಜ್ಞಾನಿ ಡಾ.ಟಿ.ಎನ್. ದೇವರಾಜ್ ತಿಳಿಸಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಮಹಿಳಾ ಮತ್ತು ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗತಾರತಮ್ಯಕ್ಕೆ ಕಡಿವಾಣ ಹಾಕದೆ ಹೊರತು ಮಹಿಳೆಯರು ಸಬಲೀಕರಣ ಸಾಧ್ಯವಿಲ್ಲ. ಪ್ರಪಂಚದ ಏಷ್ಯಾಮತ್ತು ಆಫ್ರಿಕಾ ರಾಷ್ಟ್ರದಲ್ಲಿ ಶೇ.80ರಷ್ಟು ಆಹಾರ ಉತ್ಪಾದನೆ ಆಗುತ್ತದೆ. ಆದರೆ ಕೇಂದ್ರ ಸರಕಾರದ ಪ್ರಕಾರ 50 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಆಹಾರ ಭದ್ರತೆಗೆ ಒತ್ತು ಕೊಡುವ ನಾವೆಲ್ಲ ಅಪೌಷ್ಟಿಕತೆ ಕಡಿಮೆ ಮಾಡಬೇಕಾಗಿದೆ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಆಹಾರ ಬಹುಮುಖ್ಯವಾಗಿದ್ದು, ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಹಣಕ್ಕಿಂತ ಹೆಚ್ಚಾಗಿ ಆಹಾರ ಪದಾರ್ಥಗಳಿಗೆ ಪ್ರಮುಖ್ಯತೆ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಹಣಕ್ಕೆ ಹೆಚ್ಚಿನ ಮಹತ್ವ ನೀಡುವುದರಿಂದ ಎಲ್ಲವನ್ನು ಖರೀದಿಸಿ ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ರತಿಯೊಬ್ಬರ ಸಾಧನೆ ಹಿಂದೆ ಹೆಣ್ಣು ಇರುತ್ತಾಳೆ. ಆಹಾರ ಪದಾರ್ಥ ವಿನಿಮಯ ಮಾಡುವಲ್ಲಿ ಹೆಣ್ಣಿನ ಪಾತ್ರ ಅತಿ ಮುಖ್ಯ. ಮದುವೆ, ಶುಭ ಸಮಾರಂಭಗಳಲ್ಲಿ ಆಹಾರವನ್ನು ವ್ಯರ್ಥ ಮಾಡದೆ ಅವಶ್ಯಕತೆ ಅನುಗುಣವಾಗಿ ಬಳಸಬೇಕು. ಇದರಿಂದ ನಮ್ಮ ಮುಂದಿನ ಯುವ ಪೀಳಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಉಪಕೃಷಿ ನಿರ್ದೇಶಕಿ ಹಂಸವೇಣಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಧಾನ್ಯತೆ ಹೆಚ್ಚಾಗಿದ್ದು, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಮಹಿಳೆಯರಿಗೆ ಮಾತುಗಳಿಗೆ ಗೌರವ ಮತ್ತು ಸಮಾನತೆ ದೊರೆಯಬೇಕು ಎಂದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ಸಣ್ಣ ಕೆಲಸದಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ಅತ್ಯಂತಹ ಸಮರ್ಪಕವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದ ಅವರು, ಕೃಷಿ ಕ್ಷೇತ್ರದಲ್ಲಿ ಒಂದು ಬೆಳೆ ಬೆಳೆಯುವ ಬದಲು ಬಹು ಬೆಳೆ ಬೆಳೆಯಬೇಕು. ಇದರಿಂದ ಲಾಭದಾಯವನ್ನು ಪಡೆಯುವ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಹಾಗೆಯೇ ಬೆಳೆಗಳು ರೋಗದಿಂದ ನಿಯಂತ್ರಗೊಳ್ಳಲು ಸಹಕಾರಿ ಎಂದು ಮಾಹಿತಿ ನೀಡಿದರು.
ನಿವೃತ್ತ ವೈದ್ಯಾಕಾರಿ ಡಾ. ಶಾಂತಾ ಭಟ್ ಮಾತನಾಡಿ, ದೇವರು ಮನುಷ್ಯನಿಗೆ ದೇಹ ಬಳುವಳಿಯಾಗಿ ನೀಡಿದ್ದಾನೆ.ಅದನ್ನು ಆರೋಗ್ಯದಿಂದ ಕಾಪಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಮಹಿಳೆಯರು ವ್ಯಾಯಾಮ ಮಾಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಮತ್ತು ಧಾನ್ಯ, ತರಕಾರಿಯಿಂದ ತಯಾರಿಸಿದ ಶುದ್ಧ ಆಹಾರ ಸೇವಿಸಬೇಕೆಂದು ಸಲಹೆ ನೀಡಿದರು.
ಕೃಷಿ ಇಲಾಖೆ ಉಪಕೃಷಿ ನಿರ್ದೇಶಕರಾದ ಡಾ. ರೇಣುಕಾ, ಸ್ಪೂರ್ತಿ, ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್, ಸಿರಿಗೆರೆ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸದಸ್ಯೆ ಎಂ.ಕೆ. ರೇಣುಕಾರ್ಯ ಇದ್ದರು.







