ವೀರಶೈವ, ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು : ಡಾ.ಶಾಮನೂರು ಶಿವಶಂಕರಪ್ಪ

ದಾವಣಗೆರೆ,ಅ.16:ವೀರಶೈವ ಬೇರಲ್ಲ, ಲಿಂಗಾಯತವೂ ಬೇರೆಯಲ್ಲ. ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ರೇಣುಕಾ ಮಂದಿರದಲ್ಲಿ ಭಾನುವಾರ ಸಂಜೆ ರಂಭಾಪುರಿ ಪೀಠದ ಲಿಂ. ಶ್ರೀ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ 35ನೇ ವರ್ಷದ ಪುಣ್ಯಾರಾಧನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಒಂದೇ ಎಂಬುದು ನನ್ನದಷ್ಟೇ ಅಲ್ಲ, ಇಡೀ ಮಹಾಸಭಾದ ನಿಲುವೂ ಆಗಿದೆ ಎಂದ ಅವರು, ಲಿಂಗಾಯತ ಧರ್ಮವೆಂದು ಪತ್ರಿಕೆಗಳಲ್ಲಿ ಬರುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಒಂದು ಕಡೆ ವೀರಶೈವ, ಮತ್ತೊಂದು ಕಡೆ ಲಿಂಗಾಯತ ಅಂತಾ ಹೇಳಿಕೆಗಳು ಸಮಾಜದಲ್ಲೂ ಗೊಂದಲ ಮೂಡಿಸುತ್ತಿವೆ. ವೀರಶೈವ ಲಿಂಗಾಯತ ಒಂದೇ. ಇವು ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ 110 ವರ್ಷದ ಇತಿಹಾಸ ಹೊಂದಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ 23ನೇ ರಾಷ್ಟ್ರೀಯ ಅಧ್ಯಕ್ಷರಾಗಿ ತಾವು ಕಾರ್ಯ ರ್ವಹಿಸುತ್ತಿದ್ದು, ಈಗ ಪ್ರತ್ಯೇಕ ಧರ್ಮಕ್ಕೆಂದು ಹೊಸ ನಡವಳಿಕೆಗಳು ಆರಂಭವಾಗಿದ್ದು, ಹೆಚ್ಚು ಚರ್ಚೆಯೂ ಆಗುತ್ತಿದೆ ಎಂದು ಅವರು ತಿಳಿಸಿದರು.
ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್. ವೀರಣ್ಣ ಮಾತನಾಡಿ, ವೀರಶೈವ ಲಿಂಗಾಯ- ಲಿಂಗಾಯತವೆಂಬ ಕೂಗಿನ ಮಧ್ಯೆ ರೇಣುಕಾ ಮಂದಿರದಲ್ಲಿ ಉಭಯ ಗುರುಗಳ ಸಮ್ಮುಖದಲ್ಲಿ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಗಹನವಾದ ವಿಚಾರ ಮಂಡಿಸಿದ್ದು, ಮಹಾಸಭಾ ನಿಲುವನ್ನೂ ಸ್ಪಷ್ಟಪಡಿಸಿದ್ದಾರೆ ಎಂದರು.
ರಂಭಾಪುರಿ ಪೀಠದ ಡಾ. ಪ್ರಸನ್ನ ರೇಣುಕಾ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಹೊಸಪೇಟೆಯ ಸಂಗನ ಬಸವ ಸ್ವಾಮೀಜಿ, ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ, ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಮಲಯ ಶಾಂತಮುನಿ ಸ್ವಾಮೀಜಿ, ಡಾ.ಮಹಾಂತಲಿಂಗ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಪಾಲಿಕೆ ಸದಸ್ಯ ದಿನೇಶ ಕೆ. ಶೆಟ್ಟಿ, ದೇವರಮನಿ ಶಿವಕುಮಾರ, ರಾಜಶೇಖರ ಗುಂಡಗಟ್ಟಿ ಇದ್ದರು.







