ದ.ಕ.ಜಿ.ಪಂ. ಕೆಆರ್‌ಡಿಎಲ್‌ನ ಶುದ್ಧ ನೀರಿನ ಘಟಕಗಳ ಹಗರಣ: ಸದನ ಸಮಿತಿ ಮರು ರಚನೆಗೆ ತೀರ್ಮಾನ

ಮಂಗಳೂರು, ಅ.16: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತ (ಕೆಆರ್‌ಡಿಎಲ್)ದಿಂದ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಆಗಿದೆ ಎನ್ನಲಾದ ಹಗರಣಗಳ ತನಿಖೆಗೆ ಸದನ ಸಮಿತಿಯನ್ನು ಮರು ರಚಿಸಲು ಇಂದು ನಡೆದ ದ.ಕ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯ ವೇಳೆ ಸದಸ್ಯರ ಆರೋಪ, ಆಗ್ರಹದ ಮೇರೆಗೆ ಕೆಆರ್‌ಡಿಎಲ್‌ನ ಕಾಮಗಾರಿಗಳ ಸಮಗ್ರ ತನಿಖೆಗೆ ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಆದರೆ ಸದನ ಸಮಿತಿ ಸಮರ್ಪಕವಾಗಿಲ್ಲ ಎಂಬ ಆಕ್ಷೇ ಇಂದಿನ ಸಭೆಯಲ್ಲಿ ವ್ಯಕ್ತವಾಯಿತು.
ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಆಗಿರುವ ಅವ್ಯವಹಾರ ತನಿಖೆಗೆ 2 ತಿಂಗಳ ಹಿಂದೆ ಸದನ ಸಮಿತಿಗೆ ನಿರ್ಣಯಿಸಲಾಗಿತ್ತು. ಅದಾಗಿ 15 ದಿನಗಳಲ್ಲಿ ಸಮಿತಿ ರನಚೆ ಆಗಿದೆ. ಆದರೆ ಕಳೆದ ಎರಡು ದಿನಗಳ ಹಿಂದಷ್ಟೇ ಸದನ ಸಮಿತಿಯ ಸದಸ್ಯರಿಗೆ ಕರೆ ಮಾಡಿ ನಾಳೆ ಇಂತಹ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂಬ ಕರೆ ಬಂದಿದೆ. ಆ ರೀತಿ ಒಂದು ದಿನದಲ್ಲಿ ಹೋಗಿ ಪರಿಶೀಲನೆ ಮಾಡಲು ನಾವೇನು ಐಸಿಯುನಲ್ಲಿರುವ ರೋಗಿಯನ್ನು ನೋಡಲು ಹೋಗುವುದೇ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಸಭೆಯಲ್ಲಿ ಆಕ್ಷೇಪಿಸಿದರು.
ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ 12 ಸದಸ್ಯರ ಸಮಿತಿಗೆ ಕೆಆರ್‌ಡಿಎಲ್‌ನ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿಸಿದ ಬಗ್ಗೆಯೂ ಸಭೆಯಲ್ಲಿ ಸದಸ್ಯರಿಂದ ಅಸವಾಧಾನ ವ್ಯಕ್ತವಾಯಿತು.
ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಈಗಾಗಲೇ ಆಗಿರುವ ಸದನ ಸಮಿತಿ ಪರಿಪೂರ್ಣವಾಗಿಲ್ಲ. ಹಿರಿಯ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ಕಾರ್ಯವ್ಯಾಪ್ತಿ ಹಾಗೂ ಕಾಲಮಿತಿಯನ್ನು ಸ್ಪಷ್ಟಪಡಿಸಬೇಕಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳು ನಡೆದಿರುವ, ನಡೆಯಬೇಕಿರುವ ಸ್ಥಳದ ಬಗ್ಗೆ ಮಾಹಿತಿ ಒದಗಿಸಬೇಕಿರುವುದರಿಂದ ಆ ಇಲಾಖೆಯ ಅಧಿಕಾರಿಯೂ ಸಮಿತಿಯಲ್ಲಿರಬೇಕಾಗುತ್ತದೆ. ಈಗಾಗಲೇ ರಚಿಸಲಾಗಿರುವ ಸಮಿತಿಗೆ ಸಂಬಂಧಿಸಿ ಲೋಪ ಆಗಿದೆ. ಪ್ರಸ್ತುತ ಅಧ್ಯಕ್ಷರು ಜಿ.ಪಂ. ಸದಸ್ಯರ ಹೆಸರನ್ನು ನೀಡಿದ್ದಲ್ಲಿ ಮತ್ತೆ ಹೊಸ ಸಮಿತಿ ರಚನೆ ವಾಡಲಾಗುವುದು ಎಂದು ಹೇಳಿದರು. ಸದಸ್ಯರ ಆಗ್ರಹದ ಹಿನ್ನೆಲೆಯಲ್ಲಿ ಸಮಿತಿಯಲ್ಲಿ ಜಿ.ಪಂ.ನ ಹಿರಿಯ ಅಧಿಕಾರಿಯೊಬ್ಬರನ್ನು ಸದನ ಸಮಿತಿಗೆ ಆಯ್ಕೆ ಮಾಡಲು ನಿರ್ಣಯಿಸಲಾಯಿತು.
ಬಗೆಹರಿಯದ ಸ್ಪಿಲ್ ಓವರ್ ಸಮಸ್ಯೆ: ಹಿಂದಿನ ಸಭೆಯ ನಿರ್ಣಯ ಪಾಲನೆಗೆ ಆದೇಶ
ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಕಳೆದ ಹಲವಾರು ಸಮಯದಿಂದ ಸಮಸ್ಯೆಯಾಗಿ ಕಾಡುತ್ತಿರುವ ಮುಂದುವರಿದ ಕಾಮಗಾರಿ(ಸ್ಪಿಲ್ ಓವರ್)ಗೆ ಅನುದಾನ ಮೀಸಲಿಡುವ ಬಗ್ಗೆ ಇಂದಿನ ಸಭೆಯಲ್ಲೂ ಚರ್ಚೆ- ವಾಗ್ವಾದ ಮುಂದುವರಿಯಿತು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ (ಎನ್‌ಆರ್‌ಡಿಡಬ್ಲುಪಿ)ಯಡಿ ಲಭ್ಯವಿರುವ ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ಅನುದಾನವನ್ನು ಸಂಪೂರ್ಣವಾಗಿ ಮುಂದುವರಿದ ಕಾಮಗಾರಿ(ಸ್ಪಿಲ್ ಓವರ್)ಗಳಿಗೆ ವಿನಿಯೋಗಿಸುವುದನ್ನು ವಿರೋಧಿಸಿ ಕಳೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಲಾಗಿತ್ತು. ಲಭ್ಯವಿರುವ ಅನುದಾನವನ್ನು 36 ಕ್ಷೇತ್ರಗಲಿಗೆ 47.73 ಲಕ್ಷ ರೂ.ನಂತೆ ಹಂಚಿಕೆ ಮಾಡಲು ನಿರ್ಣಯಿಸಲಾಗಿತ್ತು. ಆದರೆ ಬಂಟ್ವಾಳದಲ್ಲಿ ಸದಸ್ಯರು ಈ ಬಗ್ಗೆ ಚರ್ಚೆ ನಡೆಸಿ ಮುಂದುವರಿದ ಕಾಮಗಾರಿಯ ವೆಚ್ಚ ಅಧಿಕವಿರುವುದರಿಂದ ಅದನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಿಕೊಳ್ಳುವುದರೊಂದಿಗೆ ಹೊಸ ಕ್ರಿಯಾ ಯೋಜನೆಗೆ ಮುಂದಾಗಿರುವುದಾಗಿ ಸದಸ್ಯ ಎಂ.ಎಸ್. ಮುಹಮ್ಮದ್ ಸಭೆಗೆ ತಿಳಿಸಿದರು.
ಈ ಬಗ್ಗೆ ಕೆಲಹೊತ್ತು ಸದಸ್ಯರೊಳಗೆ ಚರ್ಚೆ ನಡೆಯಿತು. ಈ ಸಂದರ್ಭ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪ್ರತಿಕ್ರಿಯಿಸಿ ಕಳೆದ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯವನ್ನೇ ಪಾಲಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆದರೆ, ಮುಂದುವರಿದ ಕಾಮಗಾರಿಗಳಿಗೆ ಹಣ ಒದಗಿಸದೆ ಹೊಸ ಯೋಜನೆಗೆ ಕ್ರಿಯಾ ಯೋಜನೆಯನ್ನು ತಯಾರಿಸುವಂತಿಲ್ಲ. ಇದಕ್ಕೆ ಸರಕಾರದಿಂದಲೂ ಅನುಮೋದನೆ ಸಿಗುವುದಿಲ್ಲ ಎಂದು ಸದಸ್ಯೆ ಮಮತಾ ಗಟ್ಟಿ ಸಭೆಯಲ್ಲಿ ಹೇಳಿದರು.
ಬ್ಯಾಂಕ್‌ಗಳಲ್ಲಿ ಪಾಲನೆಯಾಗದ ಆದೇಶ: ಸದಸ್ಯರ ಅಸಮಾಧಾನ
ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು. ವಿವಿಧ ಯೋಜನೆಗಳ ಮಾಹಿತಿಯನ್ನು ಒದಗಿಸಬೇಕು ಎಂದು ಹಲವಾರು ಬಾರಿ ಸಭೆಯ ಮೂಲಕ ತಿಳಿಸಲಾಗಿದ್ದರೂ ಆದೇಶಗಳು ಪಾಲನೆಯಾಗುತ್ತಿಲ್ಲ ಎಂದು ಸದಸ್ಯರಾದ ತುಂಗಪ್ಪ ಬಂಗೇರ ಆಕ್ಷೇಪಿಸಿದರು.
ಸ್ವ ಉದ್ಯೋಗಕ್ಕೆ ಮುಂದಾಗುವ ಯುವಕರಿಗೆ ಸಾಲ ನೀಡುವಲ್ಲಿಯೂ ಆಸಕ್ತಿ ವಹಿಸಲಾಗುತ್ತಿಲ್ಲ. ಕಳೆದ ಸಭೆಯಲ್ಲಿ ತಾನೊಂದು ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಿದಾಗ ಆ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ಜತೆ ಮಾತನಾಡುವುದಾಗಿ ಲೀಡ್ ಅಧಿಕಾರಿಗಳು ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳು ಲೀಡ್ ಬ್ಯಾಂಕ್‌ನ ನಿಯಂತ್ರಣದಲ್ಲಿಲ್ಲ ಎಂದು ಕೃಷಿ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಹೇಳಿದರೆ, ಬಡ ಕೃಷಿ ಹಾಗೂ ರೈತರಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ ಎಂಬ ಆಕ್ಷೇವೂ ಸದಸ್ಯರಿಂದ ವ್ಯಕ್ತವಾಯಿತು.
ಸಿಇಒ ಪ್ರತಿಕ್ರಿಯಿಸಿ, ಈಗಾಗಲೇ ಬ್ಯಾಂಕ್‌ನಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡುವಂತೆ ಮೂರ್ನಾಲ್ಕು ಸಭೆಗಳಲ್ಲಿ ತಿಳಿಸಲಾಗಿದೆ. ಗ್ರಾಹಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕನ್ನಡ ತಿಳಿದಿರುವ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ಸೂಚಿಸಲಾಗಿದೆ. ಈ ಬಗ್ಗೆ ಮತ್ತೆ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ಒದಗಿಸುವುದಾಗಿ ತಿಳಿಸಿದರು.
ಗೇಲ್ ಗ್ಯಾಸ್ ಪೈಪ್‌ಲೈನ್‌ಗೆ ವಿರೋಧ
ಬಂಟ್ವಾಳ ತಾಲೂಕಿನ ಕುರ್ನಾಡು ಕ್ಷೇತ್ರದಲ್ಲಿ ಗೇಲ್ ಕಂಪನಿಯ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಈಗಾಗಲೇ ಸ್ಥಳೀಯ ಕೃಷಿಕರು, ರೈತರು ಹಾಗೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಯೂ ನಡೆದಿದೆ. ಯಾವುದೇ ಕಾರಣಕ್ಕೂ ಅಲ್ಲಿ ಗ್ಯಾಸ್‌ಪೈಪ್‌ಲೈನ್ ಆಗಬಾರದು. ಅದಕ್ಕೆ ವಿರೋಧವಿದೆ ಎಂದು ಸದಸ್ಯೆ ಮಮತಾ ಗಟ್ಟಿ ಸಭೆಯಲ್ಲಿ ಸ್ಪಷ್ಟಪಡಿಸಿದರು. ಸಭೆಯಲ್ಲಿ ಜಿ.ಪಂ. ಉಪಾಧ್ಯ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.







