ಬಿಡಿಯಾಗಿ ತಂಬಾಕು ಉತ್ಪನ್ನಗಳ ಮಾರಾಟ ಆದೇಶ ಹಿಂಪಡೆಯುವಂತೆ ಆಗ್ರಹ
ಬೆಂಗಳೂರು, ಅ.17: ಬಿಡಿ-ಬಿಡಿಯಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಸಣ್ಣ ಬೀಡಿ-ಸಿಗರೇಟು ಮಾರಾಟಗಾರರ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎನ್.ಮುರಳೀಕೃಷ್ಣ, ರಾಜ್ಯದಲ್ಲಿ ಸಣ್ಣ-ಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಾ ಸಾವಿರಾರು ಜನರು ದಿನನಿತ್ಯ ಜೀವನ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಇದೀಗ ಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧ ಮಾಡಿರುವುದರಿಂದ ಹಲವಾರು ಕುಟುಂಬಗಳು ಬೀದಿಗೆ ಬರಲಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಿಗರೇಟು ಮತ್ತು ತಂಬಾಕು ಪದಾರ್ಥಗಳ ನಿಷೇಧ ಕಾಯ್ದೆ 2013 ರ ಅಡಿಯಲ್ಲಿ ಹಲವಾರು ನಿಬಂಧನೆಗಳನ್ನು ಹೇರುವ ಮೂಲಕ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದೇವೆ. ಆದರೆ, ಸರಕಾರ ಜಾರಿ ಮಾಡಿದ ಎಲ್ಲ ಕಾನೂನುಗಳನ್ನು ಪಾಲಿಸಿ ವ್ಯಾಪಾರ ನಡೆಸುತ್ತಿದ್ದೇವೆ. ನಾವು ಯಾವುದೇ ತಂಬಾಕು ನಿಷೇಧ ಸೂಚಿಸುವ ಚಿತ್ರ ಮತ್ತು ಸಂದೇಶವಿಲ್ಲದ ತೆರಿಗೆ ವಂಚಿತ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಿದ ಸಿಗರೇಟನ್ನು ಮಾರಾಟ ಮಾಡುತ್ತಿಲ್ಲ. ಹೀಗಿದ್ದರೂ, ಮತ್ತೊವ್ಮೆು ಸರಕಾರ ನಮ್ಮ ಮೇಲೆ ಗದಾಪ್ರಹಾರ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾವು ಈಗಾಗಲೇ ಪೊಲೀಸ್, ಆರೋಗ್ಯ, ಆಹಾರ ಇಲಾಖೆಗಳು ಹಾಗೂ ತಂಬಾಕು ನಿಯಂತ್ರಣ ಮಂಡಳಿ, ತೂಕ ಮತ್ತು ಅಳತೆ ಇಲಾಖೆಗಳಿಂದ ನಿರಂತರವಾದ ಕಿರುಕುಳಕ್ಕೆ ಒಳಗಾಗಿದ್ದೇವೆ. ಅನಗತ್ಯವಾಗಿ ದಾಳಿ ನಡೆಸಿ, ದಂಡದ ನೆಪದಲ್ಲಿ ಸಾವಿರಾರು ರೂ.ಗಳು ವಸೂಲಿ ಮಾಡುತ್ತಿದ್ದಾರೆ ಎಂದ ಅವರು, ಸರಕಾರ ಈ ನಿರ್ಣಯದಿಂದ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಇದರಿಂದ ಅಂತಾರಾಷ್ಟ್ರೀಯ ಕಂಪೆನಿಗಳ ಮಾರಾಟಗಾರರಿಗೆ ಅನುಕೂಲವಾಗುತ್ತದೆ. ಹೀಗಾಗಿ, ಕೂಡಲೇ ಸರಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.







