ನ್ಯಾ.ಎ.ಜೆ.ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಅ.25 ರಂದು ರಾಜ್ಯಾದ್ಯಂತ ಧರಣಿ
ಬೆಂಗಳೂರು, ಅ.17: ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣ, ನ್ಯಾ.ಎ.ಜೆ. ಸದಾಶಿವ ಆಯೋಗ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅನುಮೋದಿಸಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕ ದಲಿತ ಸಂಘಟನೆಗಳ ನೇತೃತ್ವದಲ್ಲಿ ಅ.25 ರಂದು ರಾಜ್ಯಾದ್ಯಂತ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕಗೊಂಡಿದ್ದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಸರಕಾರಕ್ಕೆ ವರದಿ ಸಲ್ಲಿಸಿ 6 ವರ್ಷಗಳು ಕಳೆಯುತ್ತಿದೆ. ಆದರೆ, ಸರಕಾರಗಳ ನಿರ್ಲಕ್ಷ್ಯದಿಂದ ಇದುವರೆಗೂ ಅದನ್ನು ಜಾರಿಮಾಡಿಲ್ಲ. ಹೀಗಾಗಿ, ಕೂಡಲೇ ಇದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಹೊಲೆಯ, ಮಾದಿಗ, ಜಾಡಮಾಲಿ...ಹೀಗೆ ಸುಮಾರು 101 ಉಪ ಜಾತಿಗಳಿಗೆ ಶೇ.15 ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಆದರೆ, ಪರಿಶಿಷ್ಟರಲ್ಲಿ ಬಲಿಷ್ಠ ಜಾತಿಗಳು ಸಂಪೂರ್ಣ ಮೀಸಲಾತಿಯನ್ನು ಪಡೆದುಕೊಂಡು ಬೆಳೆಯುತ್ತಿದ್ದು, ಶೋಷಿತ, ಹಿಂದುಳಿದ ತಳ ಸಮುದಾಯಗಳು ಮೀಸಲಾತಿಯಿಂದ ವಂಚಿತರಾಗಿ ಮತ್ತಷ್ಟು ದುರ್ಬಲಗೊಳ್ಳುತ್ತಿವೆ. ಪರಿಶಿಷ್ಟರಲ್ಲಿರುವ ಉಪ ಜಾತಿಗಳ ಪರಿಸ್ಥಿತಿ ಸಮೀಕ್ಷೆ ನಡೆಸಲು ಸದಾಶಿವ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಆ ಸಮಿತಿಯು 2012 ರಲ್ಲಿ ವರದಿ ಸಲ್ಲಿಸಿ ಒಳ ಮೀಸಲಾತಿ ಅಗತ್ಯವಿದೆ ಎಂದು ತಿಳಿಸಿದೆ ಎಂದರು.
ಸರಕಾರದ ಎಲ್ಲ ಸ್ಥಾನಗಳಲ್ಲಿರುವ ಸ್ಥಾಪಿತ ಸಮಾಜದ ಬಲಿಷ್ಠ ಜಾತಿಗಳ ರಾಜಕೀಯ ಮುಖಂಡರು ಪರಿಶಿಷ್ಟರ ಮೀಸಲಾತಿ ಮತ್ತು ವರ್ಗೀಕರಣದಲ್ಲಿ ರಾಜಕೀಯ ಲೆಕ್ಕಾಚಾರ ಮಾಡಿ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಚಳವಳಿ ದಮನ ಮಾಡುವ ಷಂಡ್ಯತ್ರ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರರಂತೆ ಬಿಂಬಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯವನ್ನೇ ಸಮಾಪ್ತಿ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅಂಗೀಕಾರ ಪಡೆದು, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೇಡಿಕೆಗಳು: ಕಾಂತರಾಜ್ ಆಯೋಗದ ವರದಿ ಅನುಷ್ಠಾನಗೊಳಿಸಿ, ಎಲ್ಲಾ ಜಾತಿಗಳಿಗೆ ಆಯಾ ಜಾತಿಯ ಜನಸಂಖ್ಯೆ ಆಧಾರಿತ ಜಾತಿವಾರು ಮೀಸಲಾತಿ ಕಲ್ಪಿಸಬೇಕು. ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಸುಗ್ರೀವಾಜ್ಞೆ ಹೊರಡಿಸಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಂಚಾಲಕ ಜೆ.ಸಿ.ಪ್ರಕಾಶ್, ಮಾದಿಗ ದಂಡೋರದ ಎಂ.ನಾರಾಯಣಸ್ವಾಮಿ, ಆದಿಜಾಂಬವ ಸಂಘದ ಸಿ.ಪಿ.ರಮೇಶ್‌ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.







