ಕಸ್ಟಡಿ ಸಾವಿನ ಪ್ರಕರಣ: ಹಿ.ಪ್ರದೇಶದ ಐಜಿಪಿ, ಇತರರ ನ್ಯಾಯಾಂಗ ಬಂಧನ ವಿಸ್ತರಣೆ

ಶಿಮ್ಲಾ,ಅ.17: ಹಿಮಾಚಲ ಪ್ರದೇಶದ ಕೋಟಖಾಯಿಯಲ್ಲಿ ಹದಿಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕಸ್ಟಡಿಯಲ್ಲಿ ಆರೋಪಿಯೋರ್ವನ ಸಾವಿನ ಪ್ರಕರಣದಲ್ಲಿ ಐಜಿಪಿ ಝಡ್.ಎಚ್.ಝೈದಿ, ಡಿವೈಎಸ್‌ಪಿ ಮನೋಜ ಜೋಷಿ ಮತ್ತು ಇತರ ಆರು ಪೊಲೀಸ್ ಸಿಬ್ಬಂದಿಗಳಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನವನ್ನು ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯವು ಅ.23ರವರೆಗೆ ವಿಸ್ತರಿಸಿತು. ಆರೋಪಿಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.
ಆ.29ರಂದು ಆರೋಪಿಗಳನ್ನು ಬಂಧಿಸಿದ್ದ ಸಿಬಿಐ ಇನ್ನೂ ಆರೋಪಪಟ್ಟಿಯನ್ನು ಸಲ್ಲಿಸದಿರುವ ಹಿನ್ನೆಲೆಯಲ್ಲಿ ಅವರ ನ್ಯಾಯಾಂಗ ಬಂಧನವನ್ನು ಇದೀಗ ನಾಲ್ಕನೇ ಬಾರಿಗೆ ವಿಸ್ತರಿಸಲಾಗಿದೆ. ಅವರನ್ನು ಮಂಪರು ಪರೀಕ್ಷೆಗೂ ಒಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ, ನೇಪಾಳ ಮೂಲದ ಕೂಲಿಕಾರ್ಮಿಕ ಸೂರಜ್ ಸಿಂಗ್(29)ನನ್ನು ಅದೇ ಪ್ರಕರಣದಲ್ಲಿಯ ಇನ್ನೋರ್ವ ಆರೋಪಿಯು ಜುಲೈ 18ರಂದು ರಾತ್ರಿ ಕೋಟಖಾಯಿ ಪೊಲೀಸ್ ಠಾಣೆಯಲ್ಲಿ ಕೊಲೆ ಮಾಡಿದ್ದನೆಂದು ಹೇಳಲಾಗಿದೆ. ಈ ಘಟನೆಯು ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸರು ಪ್ರಕರಣದಲ್ಲಿ ಸಿಂಗ್ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದರು.
ಝೈದಿ ಹದಿಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಬಾಲಕಿಯು ಜು.4ರಿಂದ ನಾಪತ್ತೆ ಯಾಗಿದ್ದು, ಜು.6ರಂದು ಕೋಟಖಾಯಿಯ ಹಲಿಯಾಲಾ ಅರಣ್ಯ ಪ್ರದೇಶದಲ್ಲಿ ಆಕೆಯ ನಗ್ನಶವ ಪತ್ತೆಯಾಗಿತ್ತು.







