ಆರೋಪಿಯ ಖುಲಾಸೆ ವಿರುದ್ಧ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಅಸ್ತು
1989ರ ಭಾಗಲ್ಪುರ ದಂಗೆಗಳು

ಹೊಸದಿಲ್ಲಿ ,ಅ.17: 1989ರ ಭಾಗಲ್ಪುರ ಕೋಮು ದಂಗೆಗಳ ಪ್ರಕರಣದಲ್ಲಿ ಕಮಲೇಶ್ವರ ಪ್ರಸಾದ ಯಾದವ ಎಂಬಾತನ ಖುಲಾಸೆಯ ವಿರುದ್ಧ ಬಿಹಾರ ಸರಕಾರವು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನಡೆಸಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ. ಈ ದಂಗೆಗಳಲ್ಲಿ 1000ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದರು.
ಹದಿಹರೆಯದ ಮುಸ್ಲಿಂ ಯುವಕನೋರ್ವನ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಯಾದವಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಈ ವರ್ಷದ ಜೂನ್‌ನಲ್ಲಿ ತಳ್ಳಿಹಾಕಿದ್ದ ಪಾಟ್ನಾ ಉಚ್ಚ ನ್ಯಾಯಾಲಯವು ಆತನನ್ನು ಖುಲಾಸೆಗೊಳಿಸಿತ್ತು.
ದಂಗೆ ಪ್ರಕರಣಗಳಿಗೆ ಮರುಜೀವ ನೀಡಲು ನಿತೀಶ ಕುಮಾರ್ ಸರಕಾರವು 2006ರಲ್ಲಿ ನಿರ್ಧರಿಸಿದ ಬಳಿಕ 2009,ನ.6ರಂದು ಭಾಗಲ್ಪುರ ನ್ಯಾಯಾಲಯವು ಯಾದವ(58)ನನ್ನು ದೋಷಿಯೆಂದು ಘೋಷಿಸಿತ್ತು.
ಎಫ್‌ಐಆರ್ ಸಲ್ಲಿಕೆಯಲ್ಲಿ ವಿಳಂಬವಾಗಿದೆ ಎಂಬ ಕಾರಣವನ್ನೊಡ್ಡಿ ಉಚ್ಚ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ ತಪ್ಪು ಮಾಡಿದೆ ಎಂದು ರಾಜ್ಯದ ಪರ ವಕೀಲರಾದ ಕೆಟಿಎಸ್ ತುಲಸಿ ಮತ್ತು ಶೋಯೆಬ್ ಆಲಂ ವಾದಿಸಿದ್ದರು.





