ಆಯುರ್ವೇದದಡಿಯಲ್ಲಿ ಆರೋಗ್ಯ ಕ್ರಾಂತಿ ನಡೆಸಬೇಕಾದ ಕಾಲ ಬಂದಿದೆ: ಪ್ರಧಾನಿ
ದೇಶದ ಮೊದಲ ಆಲ್ ಇಂಡಿಯ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಲೋಕಾರ್ಪಣೆ

ಹೊಸದಿಲ್ಲಿ, ಅ. 17: ಆಯುರ್ವೇದದ ಪ್ರಾಮುಖ್ಯತೆ ಒತ್ತಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಸಾಂಪ್ರದಾಯಿಕ ವೈದ್ಯ ಪದ್ಧತಿ ಅಡಿ ಆರೋಗ್ಯ ಕ್ರಾಂತಿ ನಡೆಯಬೇಕಾದ ಕಾಲ ಬಂದಿದೆ ಎಂದು ಮಂಗಳವಾರ ಹೇಳಿದ್ದಾರೆ.
ಇಲ್ಲಿ ದೇಶದ ಮೊದಲ ಆಲ್ ಇಂಡಿಯ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅವರು, ನಿಸರ್ಗ ಹಾಗೂ ಉತ್ತಮಿಕೆಯತ್ತ ಜಗತ್ತು ಚಲಿಸುತ್ತಿದೆ ಎಂದರು.
ಇಂದು ಆಯುರ್ವೇದ ದಿವಸ್ ಎಂದು ಗುರುತಿಸಿದ ಅವರು, ವೈದ್ಯಕೀಯ ವ್ಯವಸ್ಥೆ ಭಾರತದ ಸಾಮರ್ಥ್ಯ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು ಇದನ್ನು ರಕ್ಷಿಸಬೇಕು ಎಂದರು. ಹಾಗೂ ಯಾವುದೇ ದುಷ್ಪರಿಣಾಮ ಇಲ್ಲದೆ ಜನರಿಗೆ ಪರಿಹಾರ ನೀಡುವ ಅಲೋಪತಿಯಂತಹ ಔಷಧ ಸಂಶೋಧಿಸಿ ಎಂದು ಈ ಕ್ಷೇತ್ರದ ತಜ್ಞರಲ್ಲಿ ವಿನಂತಿಸಿದರು.
ಆಯುರ್ವೇದವನ್ನು ಸಬಲಗೊಳಿಸಲು ತಮ್ಮ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್‌ನ ಒಂದು ಭಾಗವನ್ನು ಬಳಸಿಕೊಳ್ಳುವಂತೆ ಪ್ರಧಾನಿ ಖಾಸಗಿ ಸಂಸ್ಥೆಗಳನ್ನು ಆಗ್ರಹಿಸಿದರು.
ಕಳೆದ 30 ವರ್ಷಗಳಲ್ಲಿ ಐಟಿ ಕ್ರಾಂತಿ ಆಗಿರುವುದನ್ನು ನಾವು ನೋಡಿದ್ದೇವೆ. ಈಗ ಆಯುರ್ವೇದದ ಅಡಿಯಲ್ಲಿ ಆರೋಗ್ಯ ಕ್ರಾಂತಿ ನಡೆಯಬೇಕಾದ ಸಮಯ ಬಂದಿದೆ. ಆಯುರ್ವೇದವನ್ನು ಪುನರುಜ್ಜೀನವಗೊಳಿಸಲು, ಸಬಲಗೊಳಿಸಲು ಪಣ ತೊಡೋಣ ಎಂದು ಅವರು ಹೇಳಿದರು.
ಭಾರತ ಸ್ವಾತಂತ್ರ ಪಡೆದ ಬಳಿಕ ಆಯುರ್ವೇದ ಪ್ರಾಮುಖ್ಯತೆ ಕಳೆದುಕೊಂಡಿದೆ. ಆದುದರಿಂದ ಅದನ್ನು ಬಲಿಷ್ಠಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಆಯುರ್ವೇದಕ್ಕೆ ಸಂಬಂಧಿಸಿದ ಆಸ್ಪತ್ರೆಗಳನ್ನು ಆರಂಭಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.







