ಶ್ರೀಶಾಂತ್‌ಗೆ ಆಜೀವ ನಿಷೇಧವನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್

ಕೊಚ್ಚಿ, ಅ.17: ಭಾರತದ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್.ಶ್ರೀಶಾಂತ್ ಪರ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಕೇರಳ ಹೈಕೋರ್ಟ್ ಮಂಗಳವಾರ ಶ್ರೀಶಾಂತ್ ವಿರುದ್ಧ ಆಜೀವ ನಿಷೇಧವನ್ನು ಎತ್ತಿ ಹಿಡಿದಿದೆ.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನವನೀತಿ ಪ್ರಸಾದ್ ನೇತೃತ್ವದ ವಿಭಾಗೀಯ ಪೀಠವು ಬಿಸಿಸಿಐನ ಮೇಲ್ಮನವಿಯನ್ನು ಪುರಸ್ಕರಿಸಿ ಈ ಮಹತ್ವದ ತೀರ್ಪು ನೀಡಿದ್ದು, ಇದರೊಂದಿಗೆ ಎಸ್.ಶ್ರೀಶಾಂತ್‌ಗೆ ಕ್ರಿಕೆಟ್‌ಗೆ ವಾಪಸಾಗುವ ಯತ್ನಕ್ಕೆ ಮತ್ತೆ ಹಿನ್ನಡೆ ಉಂಟಾಗಿದೆ.
ಶ್ರೀಶಾಂತ್ ವಿರುದ್ಧ ಬಿಸಿಸಿಐ ವಿಧಿಸಿದ್ದ ಆಜೀವ ನಿಷೇಧ ಆದೇಶವನ್ನು ಕಳೆದ ಆಗಸ್ಟ್ 7ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಬಿಸಿಸಿಐ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ತನ್ನ ತೀರ್ಪಿನಲ್ಲಿ ಬಿಸಿಸಿಐ ವಿಧಿಸಿರುವ ನಿಷೇಧದ ವಿರುದ್ಧ ನ್ಯಾಯಾಲಯವು ನ್ಯಾಯಾಂಗ ವಿಮರ್ಶೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಶ್ರೀಶಾಂತ್‌ಗೆ ನ್ಯಾಯಾಲಯದ ವಿಭಾಗೀಯ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ ಕೇರಳ ರಣಜಿ ತಂಡ ಮತ್ತು ಭಾರತದ ಕ್ರಿಕೆಟ್ ತಂಡಕ್ಕೆ ಮರಳಿ ಪ್ರವೇಶಿಸುವ ಕನಸು ಭಗ್ನಗೊಂಡಿದೆ.
ಕೇಂದ್ರ ಹಣಕಾಸು ಸಚಿವ ಅರಣ್ ಜೇಟ್ಲಿ ನೇತೃತ್ವದ ಬಿಸಿಸಿಐನ ಶಿಸ್ತು ಸಮಿತಿಯು 2015ರಲ್ಲಿ ಶ್ರೀಶಾಂತ್‌ಗೆ ಕ್ರಿಕೆಟ್‌ಗೆ ಆಜೀವ ನಿಷೇಧ ವಿಧಿಸಿತ್ತು. ಶ್ರೀಶಾಂತ್ ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಇದೆ.







