ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿಗೆ ನೀತಿ ಆಯೋಗದ ಉಪಾಧ್ಯಕ್ಷರ ವಿರೋಧ

ಹೊಸದಿಲ್ಲಿ,ಅ.17: ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿ ನೀತಿಯ ವಿಸ್ತರಣೆಗೆ ತಾನು ವಿರುದ್ಧವಾಗಿದ್ದೇನೆ ಎಂದು ಹೇಳಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಇನ್ನಷ್ಟು ಪ್ರಯತ್ನಗಳು ಅಗತ್ಯವಾಗಿವೆ ಎಂದು ಒಪ್ಪಿಕೊಂಡಿದ್ದಾರೆ.
ಖಾಸಗಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಉದ್ಯೋಗ ಮೀಸಲಾತಿ ದೊರೆಯಬೇಕೆಂದು ಹಲವಾರು ರಾಜಕೀಯ ನಾಯಕರು ಪ್ರತಿಪಾದಿಸುತ್ತಿದ್ದಾರೆ.
ಪ್ರತಿವರ್ಷ 60 ಲಕ್ಷ ಯವಜನರು ಕಾರ್ಮಿಕ ಪಡೆಯನ್ನು ಸೇರುತ್ತಿದ್ದಾರಾದರೂ ಸರಕಾರವು ಕೇವಲ 10-12 ಲಕ್ಷ ಯುವಜನರಿಗೆ ಉದ್ಯೋಗಗಳನ್ನು ಒದಗಿಸಲು ಸಮರ್ಥವಾಗಿದೆ. ಹಲವರು ಅನೌಪಚಾರಿಕ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಕಂಡುಕೊಳ್ಳುತ್ತಾರಾದರೂ ಅಲ್ಲಿಯೂ ಉದ್ಯೋಗಗಳ ಕೊರತೆಯಿದೆ ಮತ್ತು ಇದರ ಪರಿಣಾಮವಾಗಿ ವಿವಿಧ ವರ್ಗಗಳ ಜನರಿಂದ ದೂರುಗಳು ಬರುತ್ತಿವೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರ್ ಹೇಳಿದರು.
ಕೇಂದ್ರ ಸಚಿವ ರಾಮ ವಿಲಾಸ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿಯು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿಗಾಗಿ ಇತ್ತೀಚಿಗೆ ಆಗ್ರಹಿಸಿತ್ತು. ಹಿಂದೆಯೂ ಹಲವಾರು ರಾಜಕೀಯ ಪಕ್ಷಗಳು ಇಂತಹುದೇ ಬೇಡಿಕೆಯನ್ನು ಮಂಡಿಸಿ ದ್ದವು.
ಕಳೆದ ವರ್ಷ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಪ್ರತಿಪಾದಿಸಿದ್ದರು. ಎರಡು ತಿಂಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರೂ ಈ ಬಗ್ಗೆ ಧ್ವನಿಯನ್ನೆತ್ತಿದ್ದರು.
ಆದರೆ ಹಲವಾರು ಕೈಗಾರಿಕಾ ಸಂಘಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ.







