ಡಿಸೆಂಬರ್‌ನಲ್ಲಿ 1.80 ಕೋಟಿ ರೂ. ವೆಚ್ಚದ ಆಯುಷ್ ಆಸ್ಪತ್ರೆ ಲೋಕಾರ್ಪಣೆ
ಆಯುರ್ವೇದ ದಿನಾಚರಣೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ, ಅ.17: ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಕಾರಿ ಆಯುರ್ವೇದಿಕ್ ಆಸ್ಪತ್ರೆಯು ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬೆಂಗಳೂರು ಆಯುಷ್ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಉಡುಪಿ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಆಯು ರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಆರೋಗ್ಯ ಪದ್ಧತಿ. ಆಯುರ್ವೇದಿಕ್ ಕುರಿತ ಶೇ.90ರಷ್ಟು ಜ್ಞಾನವನ್ನು ನಾವು ಕಳೆದುಕೊಂಡಿದ್ದೇವೆ. ಈಗ ಉಳಿದಿರುವುದು ಕೇವಲ ಶೇ.10 ಮಾತ್ರ. ಆದುದರಿಂದ ಕಳೆದುಕೊಂಡ ಜ್ಞಾನ ಮರಳಿ ಪಡೆಯಬೇಕಾದರೆ ಆಯುವೇರ್ದಿಕ್ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯಬೇಕಾಗಿವೆ ಎಂದರು.
ಆದರೆ ಭಾರತದಲ್ಲಿ ಸಂಶೋಧನೆಗಳಿಗೆ ಪ್ರೋತ್ಸಾಹ ಹಾಗೂ ಹಣಕಾಸು ವ್ಯಯ ಮಾಡುವುದು ತೀರಾ ಕಡಿಮೆ. ಆ ಕಾರಣದಿಂದ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ತಂತ್ರಜ್ಞಾನ, ಆರೋಗ್ಯ, ವಿಜ್ಞಾನ ಕ್ಷೇತ್ರದ ಸಂಶೋಧನೆ ಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಉಪಸ್ಥಿತರಿದ್ದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ಸ್ವಾಗತಿಸಿದರು. ಡಾ.ವೀಣಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.







