ಗದ್ದಲದ ನಡುವೆ ನಡೆದ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಮೈಸೂರು, ಅ.17: ಗದ್ದಲ, ಗೊಂದಲ, ಧಿಕ್ಕಾರ, ಕೂಗಾಟಗಳ ನಡುವೆ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಮನು ಬಳಿಗಾರ್, ನವೆಂಬರ್ 24, 25 ಹಾಗೂ 26ರಂದು 83ನೆ ಅಖಿಲ ಭಾರತ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ರಾಯಚೂರಿನಲ್ಲಿ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಈ ವೇಳೆ ಮೈಸೂರಿನಲ್ಲಿ ಸಮ್ಮೇಳನ ನಡೆಸುವ ಯೋಜನೆ ರೂಪಿಸಿದ್ದೆವು. 102ವರ್ಷಗಳ ಇತಿಹಾಸವಿರುವ ಈ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಖುಷಿ ತಂದಿದೆ. ಮೈಸೂರಿನಲ್ಲಿಯೂ ಕೂಡ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಕನ್ನಡ ಪರ ಸಂಘಟನೆಗಳು ಸಲಹೆ, ಅಭಿಪ್ರಾಯಗಳನ್ನು ತಿಳಿಸಿ,ನಿಮ್ಮ ಸಹಕಾರವಿದ್ದರೆ ಸಮ್ಮೇಳನ ಉತ್ತಮವಾಗಿ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಆರಂಭದಲ್ಲಿಯೇ ಗದ್ದಲವೇರ್ಪಟ್ಟಿತ್ತು. ಅಭಿಪ್ರಾಯ ತಿಳಿಸುವ ವೇಳೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಕನ್ನಡಪರ ಸಂಘಟನೆಗಳ ನಡುವೆಯೇ ವಾಗ್ವಾದವುಂಟಾಯಿತು. ಸಮ್ಮೇಳನ ನಡೆಸುವ ವಿಷಯಕ್ಕೆ ಕೆಲ ಕಾಲ ಗೊಂದಲ ಉಂಟಾಯಿತು. ಮೊದಲಿಗೆ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಕ್ರಮಗಳ ತನಿಖೆಯಾಗಬೇಕು. ಅರಮನೆಯಲ್ಲೇ ಸಮ್ಮೇಳನ ನಡೆಯಬೇಕು ಇವರ ಅಕ್ರಮಗಳನ್ನು ಪ್ರಶ್ನೆ ಮಾಡಿದರೆ ನನ್ನನ್ನು ಭಯೋತ್ಪಾದಕನ ರೀತಿ ನೋಡುತ್ತಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವಾಸು, ವೈಯುಕ್ತಿಕ ವಿಚಾರಗಳಿಗೆ ಅವಕಾಶವಿಲ್ಲ. ಸಮ್ಮೇಳನದ ಮುಖ್ಯ ವಿಚಾರಗಳ ಬಗ್ಗೆ ಅಭಿಪ್ರಾಯ, ಸೂಚನೆ ನೀಡಿ ಎಂದರು. ಇದಕ್ಕೆ ಪ್ರತಿಕ್ರಿಸಿದ ಬನ್ನೂರು ರಾಜು ನಮ್ಮ ವೈಯಕ್ತಿಕ ವಿಚಾರಗಳನ್ನು ಲಘುವಾಗಿ ಪರಿಗಣಿಸಬೇಡಿ ನನಗೆ ಜೀವ ಭಯ ಇದೆ. ಮುಂದೆ ಆಗಬಹುದಾದ ಅನಾಹುತಗಳಿಗೆ ನೀವೇ ಕಾರಣರಾಗುತ್ತೀರಿ ಎಂದು ಆಕ್ರೋಶದಿಂದ ನುಡಿದರು.
ಬಳಿಕ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಮೊದಲು ಜಿಲ್ಲಾ ಸಾಹಿತ್ಯ ಪರಿಷತ್‍ನಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೆ ಆದೇಶಿಸಿ ನಂತರ ಸಮ್ಮೇಳನ ನಡೆಸಲು ಮುಂದಾಗಿ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಈ ಹಿಂದೆಯೇ ದೂರು ನೀಡಲಾಗಿದೆ. ಜೊತೆಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ ಎಂದರು.
ಮೈಸೂರು ಕನ್ನಡ ವೇದಿಕೆ ಗೌರವಾಧ್ಯಕ್ಷ ನಾ.ಲಾ.ಬೀದಿ ರವಿ ಮಾತನಾಡಿ, ಈ ಪೂರ್ವಭಾವಿ ಸಭೆಗೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕಿತ್ತು. ಆದರೆ ಕಾಂಗ್ರೆಸ್ ಶಾಸಕ ವಾಸು ಅವರೊಬ್ಬರನ್ನೇ ಆಹ್ವಾನಿಸಿ ಇದೊಂದು ಕಾಂಗ್ರೆಸ್ ಸಮ್ಮೇಳನ ಎನ್ನುವಂತೆ ಮಾಡುತಿದ್ದೀರಿ ಎಂದು ಹೇಳುತ್ತಿದ್ದಂತೆ ಪರಸ್ಪರ ವಾಗ್ವಾದ ಏರ್ಪಟ್ಟಿತ್ತು. ಒಂದು ಹಂತದಲ್ಲಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರ ಮತ್ತು ಇತರೆ ಸಂಘಟನೆಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಸಾಹಿತಿ ಬನ್ನೂರು ಕೆ.ರಾಜು, ಡಾ.ಮುನಿವೆಂಕಟಪ್ಪ, ಡಿ.ಎನ್.ಕೃಷ್ಣಮೂರ್ತಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಈ ಸಭೆಗೆ ಕೆಲವು ಗೂಂಡಾಗಳನ್ನು ಕರೆದುಕೊಂಡು ನಮ್ಮ ಮೇಲೆ ಹಲ್ಲೆ ನಡೆಸುವ ಯತ್ನ ಮಾಡುತ್ತಿದ್ದೀರಿ ನಿಮ್ಮ ಸಭೆಗೆ ಧಿಕ್ಕಾರ ಎಂದು ಸಭೆಯನ್ನು ಬಹಿಷ್ಕರಿಸಿ ಧಿಕ್ಕಾರ ಕೂಗಿ ಹೊರ ನಡೆದರು. ನಂತರ ಹಲವರು ಇವರ ಜೊತೆ ಹೊರ ನಡೆದರು.
ನಂತರ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಅಭಿಪ್ರಾಯ ತಿಳಿಸಲು ಎರಡು ನಿಮಿಷ ನಿಗದಿಪಡಿಸಲಾಯಿತು. ಸಮಾಧಾನವಾಗಿ ಸಲಹೆ, ಸೂಚನೆ ನೀಡಿ ಎಂದು ಮನು ಬಳಿಗಾರ್ ಹೇಳಿದರು.
ಸಮ್ಮೇಳನದಲ್ಲಿ ಪುಸ್ತಕದ ಮಳಿಗೆಗಳನ್ನು ಹೆಚ್ಚಿಸಿ, ಸಾಹಿತಿಗಳು, ಕವಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ, ಉಚಿತ ಬಸ್ ವ್ಯವಸ್ಥೆ ಗಳನ್ನು ಕಲ್ಪಿಸಿ, ಮೈಸೂರಿನ ಎಲ್ಲಾ ವೃತ್ತಗಳಿಗೂ ಕನ್ನಡದ ಬಾವುಟ ಹಾಕಿ,ಸಮ್ಮೇಳನದ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರಿಡಿ ಎಂದು ಕನ್ನಡ ಪರ ಸಂಘಟನೆಗಳು ಮನವಿ ಮಾಡಿದವು.
ಸಭೆಯಲ್ಲಿ ಸಭೆಯಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ. ರಂದೀಪ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಅನೇಕ ಕನ್ನಡಪರ ಸಂಘ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಹಿರಿಯ ಸಾಹಿತಿಗಳಾದ ಪ್ರೊ.ಭಗವಾನ್, ಸಿ.ಪಿ.ಕೃಷ್ಣಕುಮಾರ್, ಪ್ರೊ.ನಂಜರಾಜೇ ಅರಸ್, ಪ್ರೊ.ಭೈರವಮೂರ್ತಿ ರೈತ ಸಂಘದ ಅತ್ತಹಳ್ಳಿ ದೇವರಾಜು, ಜನಾರ್ಧನ್ ಸೇರಿದಂತೆ ಅನೇಕರು ಅಭಿಪ್ರಾಯಗಳನ್ನು ತಿಳಿಸಿದರು.







