ಶೋಷಿತರ ಧ್ವನಿಯಾಗಿದ್ದ ಗೌರಿ ಲಂಕೇಶ್‌ರಂತಹ ಪತ್ರಿಕೆಯ ಅಗತ್ಯಹೆಚ್ಚುತ್ತಿದೆ -ಜಿ.ರಾಜಶೇಖರ್
ದ.ಕ ಜಿಲ್ಲಾ ಪಿಯುಸಿಎಲ್‌ನಿಂದ 41ನೆ ವರ್ಷಾಚರಣೆ

ಮಂಗಳೂರು, ಅ.17: ಬಡವರ, ಆದಿವಾಸಿಗಳ ಅನ್ಯಾಯಕ್ಕೆ ಒಳಗಾದವರ, ಶೋಷಿತರ ಪರವಾದ ಧ್ವನಿಯಾಗಿದ್ದ ಗೌರಿ ಲಂಕೇಶರಂತಹ ಪತ್ರಿಕೆ ಹಾಗೂ ಅದನ್ನು ನಡೆಸುತ್ತಿದ್ದ ಗೌರಿ ನಮ್ಮ ನಡುವೆ ಇರಬೇಕಾದ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚುತ್ತಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ತಿಳಿಸಿದ್ದಾರೆ.
ನಗರ ಜಿಲ್ಲಾ ಪಿಯುಸಿಎಲ್ ಕಚೇರಿಯಲ್ಲಿಂದು ಪಿಯುಸಿಎಲ್‌ನ 41ನೆ ವರ್ಷಾಚರಣೆಯನ್ನು ಹಾಗೂ ಗೌರಿ ಲಂಕೇಶ್ ಸ್ಮರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರಿಂದು ಮಾತನಾಡುತ್ತಿದ್ದರು.
ಸಮಾಜದಲ್ಲಿ ಹಿಂಸಾ ಕೃತ್ಯಗಳ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಪಿ.ಲಂಕೇಶ್‌ರವರ ನೇತೃತ್ವದಲ್ಲಿ ಲಂಕೇಶ್ ಪತ್ರಿಕೆ ಆರಂಭವಾಯಿತು.ಲಂಕೇಶ್ ಪತ್ರಿಕೆ ಆರಂಭಗೊಂಡ ಕಾಲಘಟ್ಟದಲ್ಲಿ ಉತ್ತರ ಭಾರತದಲ್ಲಿ ಸಾಮಾಜಿಕ ಹೋರಾಟ ನಡೆಯುತಿತ್ತು.ಲಂಕೇಶ್ ಪತ್ರಿಕೆ ಅಂತಹ ಕಾಲಘಟ್ಟದಲ್ಲಿ ಜನಸಾಮಾನ್ಯರ ಜಾಗೃತಿ ಪ್ರಜ್ಞೆಯಾಗಿ ಮೂಡಿ ಬಂತು. ಪಿ.ಲಂಕೇಶ್‌ರ ನಿಧನದ ಬಳಿಕ ಗೌರಿ ಲಂಕೇಶ್ ತಮ್ಮ ತಂದೆಯ ಹಾದಿಯಲ್ಲಿ ಗೌರಿ ಲಂಕೇಶ್ ಪತ್ರಿಕೆಯನ್ನು ನಡೆಸಿದರು. ಜೊತೆಗೆ ಸಾಮಾಜಿಕ ಳವಳಿಯಲ್ಲೂ ತಮ್ಮನ್ನು ತೊಡಗಿಸಿಕೊಂಡರು. ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಅಮಾಯಕರ ಮೇಲಿನ ದೌರ್ಜನ್ಯ, ದನ ಸಾಗಾಟ, ಗೋಹತ್ಯೆ , ಮತಾಂತರದ ಹೆಸರಿನಲ್ಲಿ ಅಮಾಯಕ ರ ಮೇಲೆ ನಡೆಯುತ್ತಿರುವ ದೌರ್ಜನ್ಯ ದ ಘಟನೆಗಳನ್ನು ಗಮನಿಸಿದಾಗ ಗೌರಿಯಂತಹ ಹೋರಾಟ ಮನೋಭಾವದ ಮಹಿಳೆಯರು ಮತ್ತು ಪತ್ರಿಕೆಯ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚಿದೆ ಎಂದು ಜಿ.ರಾಜಶೇಖರ್ ತಿಳಿಸಿದ್ದಾರೆ.
ಮಂಗಳೂರಿಗೆ ರಾಜ್ಯ ಉಚ್ಛ ನ್ಯಾಯಾಲಯದ ಸಂಚಾರಿ ಪೀಠ ಅಗತ್ಯ:-ದಕ್ಷಿಣ ಕನ್ನಡ ಜಿಲ್ಲೆಯ ಜನ ಸಾಮಾನ್ಯರಿಗೆ ಹೈ ಕೋರ್ಟ್ ಮೆಟ್ಟಲೇರಲು ಸಾಧ್ಯವಿಲ್ಲದೆ ನ್ಯಾಯ ನಿರಾಕರಣೆಯಾದ ಹಲವು ಘಟನೆಗಳಿವೆ ಇಂತಹ ಸಂದರ್ಭದಲ್ಲಿ ಜನರ ಬಳಿಗೆ ನ್ಯಾಯಾಲಯ ಬರಬೇಕಾದರೆ ಉಚ್ಛ ನ್ಯಾಯಾಲಯದ ಸಂಚಾರಿ ಪೀಠ ಮಂಗಳೂರಿಗೆ ಬರಬೇಕಾದ ಅಗತ್ಯವಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ಸಂವಿಧಾನವನ್ನೇ ಬದಲಾಯಿಸಬೇಕು ಎನ್ನುವ ಕೂಗೇಳುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಗೌರವ ಹೊಂದಿದ್ದ ಜನರ ಧ್ವನಿಯಾಗಿದ್ದ ಗೌರಿ ಲಂಕೇಶ್‌ರಂತಹ ದಿಟ್ಟ ಮಹಿಳೆಯ ಹತ್ಯೆ ಕಳವಳಕಾರಿಯಾಗಿದೆ ಎಂದು ಚಂಗಪ್ಪ ಹೇಳಿದರು.
ಅನ್ಯಾಯದ ವಿರುದ್ಧದ ಪ್ರತಿಭಟನೆಗೆ ಶಕ್ತಿಯಾಗಿದ್ದ ಗೌರಿ ಆಂತರಂಗದಲ್ಲಿ ಮಾತೃಹೃದಯವನ್ನು ಹೊಂದಿದ್ದ ಮಹಿಳೆಯಾಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತೆ ಗುಲಾಬಿ ಬಿಳಿಮಲೆ ತಿಳಿಸಿದ್ದಾರೆ.
ಸಮಾರಂಭದಲ್ಲಿ ಪಿಯುಸಿಎಲ್‌ನ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಪಿ.ಬಿ.ಡೇಸಾ ಪಿಯುಸಿಎಲ್ ವರ್ಷಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.ಪಿಯುಸಿಎಲ್‌ನ ಜಿಲ್ಲಾಧ್ಯಕ್ಷ ಕಬೀರ್ ಉಳ್ಳಾಲ್ , ಆಗಸ್ಟಿನ್ ಹಾಗೂ ಇತರ ಪದಾಧಿಕಾರಿ ಗಳು ಉಪಸ್ಥಿತರಿದ್ದರು.







