ತಾಜ್ ಮಹಲ್ ಹೇಳಿಕೆಗಾಗಿ ವಿವರಣೆ ನೀಡಿ: ಸೋಮ್ ಗೆ ಆದಿತ್ಯನಾಥ್ ಆದೇಶ

ಆಗ್ರಾ,ಆ.18 : ವಿಶ್ವವಿಖ್ಯಾತ ತಾಜ್ ಮಹಲ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿವರಣೆ ಕೇಳಿದ್ದಾರೆ. ಭಾರೀ ವಿವಾದಕ್ಕೆ ಕಾರಣವಾಗಿ ಪಕ್ಷಕ್ಕೆ ಮುಜುಗರವನ್ನೂ ಉಂಟು ಮಾಡಿದ ಇಂತಹ ಒಂದು ಹೇಳಿಕೆಯನ್ನು ಮಾಡಿದ್ದೇಕೆ ಎಂದು ಮುಖ್ಯಮಂತ್ರಿ ವಿವರಣೆ ಕೇಳಿರುವುದನ್ನು ಬಿಜೆಪಿಯ ಉನ್ನತ ಮೂಲಗಳು ದೃಢ ಪಡಿಸಿವೆ. ಈ ವಿವಾದಕ್ಕೆ ಅಂತ್ಯ ಹಾಡುವ ಸಲುವಾಗಿ ಅಕ್ಟೋಬರ್ 26ರ ತಮ್ಮ ಆಗ್ರಾ ಭೇಟಿಯ ವೇಳೆ ತಾಜ್ ಮಹಲ್ ಗೂ ಭೇಟಿ ನೀಡುವ ಕಾರ್ಯಕ್ರಮವನ್ನು ಯೋಗಿ ಆದಿತ್ಯನಾಥ್ ಹಾಕಿಕೊಂಡಿದ್ದಾರೆ.
ಸರ್ಧಾನ ಕ್ಷೇತ್ರದ ಶಾಸಕರಾಗಿರುವ ಸಂಗೀತ್ ಸೋಮ್ ಅವರ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಚಂದ್ರ ಮೋಹನ್ ಹೇಳಿದ್ದಾರೆ. ``ಸೋಮ್ ಅವರು ತಾಜ್ ಮಹಲ್ ಬಗ್ಗೆ ಹೇಳಿರುವುದು ಸಂಪೂರ್ಣವಾಗಿ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆಗ್ರಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಮ್ಮ ಪಕ್ಷದ ಸರಕಾರ ಸಾಕಷ್ಟು ಶ್ರಮಿಸುತ್ತಿದೆ, ಇದಕ್ಕಾಗಿ ಹಲವಾರು ಯೋಜನೆಗಳನ್ನೂ ಹಮ್ಮಿಕೊಂಡಿದೆ,'' ಎಂದು ಅವರು ತಿಳಿಸಿದರು.
ಈತನ್ಮಧ್ಯೆ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ಸಯ್ಯದ್ ವಸೀಂ ರಿಝ್ವಿ ಕೂಡ ಈ ವಿವಾದದಲ್ಲಿ ಕೈಯ್ಯಾಡಿಸಿದ್ದಾರೆ. ``ತಾಜ್ ಮಹಲ್ ಒಂದು ಪ್ರೇಮದ ಸಂಕೇತವಾಗಬಹುದೇ ಹೊರತು ಪ್ರಾರ್ಥನಾ ಸ್ಥಳವಲ್ಲ. ಹೆಚ್ಚಿನ ಮುಘಲರು ವಿಲಾಸಿ ವ್ಯಕ್ತಿತ್ವದವರಾಗಿದ್ದರು. ಅವರನ್ನು ತಮ್ಮ ಆದರ್ಶ ಎಂದು ಮುಸ್ಲಿಮರು ಪರಿಗಣಿಸುವುದಿಲ್ಲ,'' ಎಂದು ರಿಝ್ವಿ ಹೇಳಿದ್ದಾರೆ.







