ಕಠಿಣ ಕ್ರಮಕ್ಕೆ ಕಾಂಗ್ರೆಸ್ ನಿಯೋಗದಿಂದ ಗೃಹ ಸಚಿವರಿಗೆ ಮನವಿ
ದ.ಕ.ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲ

ಮಂಗಳೂರು, ಅ.18: ದ.ಕ. ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು, ಉಳ್ಳಾಲ ಮತ್ತು ಆಸುಪಾಸಿನ ಪ್ರಮುಖ ಪ್ರದೇಶಗಳಲ್ಲಿ ಕಳೆದ ಹಲವು ವರ್ಷದಿಂದ ಮಾದಕ ದ್ರವ್ಯ ಜಾಲ ವ್ಯಾಪಕವಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಜರಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಿಯೋಗವೊಂದು ಬುಧವಾರ ಗೃಹ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ನೇತೃತ್ವದ ನಿಯೋಗ ಗೃಹ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ವಸ್ತುಸ್ಥಿತಿಯ ಬಗ್ಗೆ ಮನವರಿಕೆ ಮಾಡಿದರು. ಜಿಲ್ಲೆಯಲ್ಲಿ ಸಕ್ರಿಯಗೊಂಡ ಈ ಜಾಲದಿಂದ ಅನೇಕ ಯುವಕರು ಬಲಿಯಾಗುತ್ತಿದ್ದಾರೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರ ದಾಸರಾಗುತ್ತಿದ್ದಾರೆ. ಇದರ ನಿಗ್ರಹಕ್ಕೆ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದೆ.
ಮಾದಕ ದ್ರವ್ಯ ಜಾಲವಲ್ಲದೆ ಸ್ಕಿಲ್ ಗೇಮ್ ಕೂಡ ಸಾಕಷ್ಟು ಅಪಾಯ ಮತ್ತು ಅನಾಹುತಕಾರಿಯಾಗಿದೆ. ಮನರಂಜನೆಯ ನೆಪದಲ್ಲಿ ಕಾರ್ಯಾಚರಿಸುವ ಬಹುತೇಕ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ನಿಯೋಗ ತಿಳಿಸಿದೆ.
ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್ ಮತ್ತಿತರರು ಉಪಸ್ಥಿತರಿದ್ದರು.





