ಯುವರಾಜ್ ಸಿಂಗ್ ವಿರುದ್ಧ ಕಿರುಕುಳ ಪ್ರಕರಣ ದಾಖಲು

ಹೊಸದಿಲ್ಲಿ,ಅ.18 : ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತವರ ಕುಟುಂಬ ಸದಸ್ಯರು ತನಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರ ಅತ್ತಿಗೆ ಹಾಗೂ ಬಿಗ್ ಬಾಸ್ ಸ್ಪರ್ಧಾಳು ಆಕಾಂಕ್ಷಾ ಶರ್ಮ ಪೊಲೀಸ್ ದೂರು ನೀಡಿದ್ದಾರೆ. ಈ ಸಂಬಂಧ ಗುರುಗ್ರಾಮ ಪೊಲೀಸರು ಆಕಾಂಕ್ಷ ಅವರ ಪತಿ ಝೊರವರ್ ಸಿಂಗ್, ಅವರ ಅತ್ತೆ ಶಬ್ನಂ ಹಾಗೂ ಮೈದುನ ಯುವರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಿಂಗ್ ಕುಟುಂಬಕ್ಕೆ ನೋಟಿಸ್ ಕೂಡ ಕಳುಹಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ಅಕ್ಟೋಬರ್ 1ಕ್ಕೆ ನಿಗದಿಯಾಗಿದೆ ಎಂದು ಆಕಾಂಕ್ಷ ಶರ್ಮ ಅವರ ವಕೀಲೆ ಸ್ವಾತಿ ಸಿಂಗ್ ಮಲಿಕ್ ಹೇಳಿದ್ದಾರೆ. ಆಕಾಂಕ್ಷಾಳ ಅತ್ತೆ ಮತ್ತು ಪತಿ, ಆಕೆ ತಮಗೆ ಆದಷ್ಟು ಬೇಗ ಮಗು ಹೆತ್ತು ಕೊಡಬೇಕೆಂದು ಆಕೆಯನ್ನು ಒತ್ತಾಯಿಸುತ್ತಿದ್ದರಲ್ಲದೆ ಆಕೆಗೆ ಮಾನಸಿಕ ಹಾಗೂ ಆರ್ಥಿಕ ಕಿರುಕುಳ ನೀಡುತ್ತಿದ್ದರು ಎಂದು ವಕೀಲೆ ಹೇಳಿದ್ದಾರೆ. ತನ್ನ ಕುಟುಂಬದಿಂದ ಆಕಾಂಕ್ಷಳು ಅನುಭವಿಸುತ್ತಿದ್ದ ಯಾತನೆಗೆ ಯುವರಾಜ್ ಮೂಕ ಸಾಕ್ಷಿಯಾಗಿದ್ದರು ಎಂದೂ ಮಲಿಕ್ ಆರೋಪಿಸಿದ್ದಾರೆ.
ಯುವರಾಜ್ ಅವರ ಸೋದರ ಝೋರಾವರ್ 2014ರಲ್ಲಿ ಆಕಾಂಕ್ಷರನ್ನು ವಿವಾಹವಾಗಿದ್ದರು. ಆದರೆ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಮಾತನಾಡಿದ ವೇಳೆ ಆಕೆ ತಾನು ವೈವಾಹಿಕ ಜೀವನದಿಂದ ಕೇವಲ ನಾಲ್ಕು ತಿಂಗಳಲ್ಲಿ ಹೊರನಡೆದಿದ್ದಾಗಿ ಹೇಳಿ ಅತ್ತೆ ಮನೆಯಲ್ಲಿ ಕಿರುಕುಳಕ್ಕೊಳಗಾಗಿರಬಹುದೆಂಬ ಸಂಶಯ ಮೂಡುವಂತೆ ಮಾಡಿದ್ದರು. ದಂಪತಿ ಕಳೆದ ವರ್ಷವೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.





