ಕೇಂದ್ರೀಯ ಪಡೆಗಳು ರಾಜ್ಯ ಪೊಲೀಸರಿಗೆ ಪರ್ಯಾಯವಲ್ಲ: ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ,ಅ.19: ಅರೆ ಮಿಲಿಟರಿ ಪಡೆಗಳನ್ನು ಪ್ರಾಥಮಿಕವಾಗಿ ತುರ್ತು ಸಂದರ್ಭ ಗಳಲ್ಲಿ ಮಾತ್ರ ನಿಯೋಜಿಸಬೇಕಿರುವುದರಿಂದ ಅವು ಪೊಲೀಸ್ ಪಡೆಗಳಿಗೆ ಪರ್ಯಾಯ ವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರಕಾರಗಳಿಗೆ ಸ್ಪಷ್ಟಪಡಿಸಿದೆ.
ಢಾರ್ಜಿಲಿಂಗ್‌ನಲ್ಲಿ ಗೂರ್ಖಾ ಹೋರಾಟಗಾರರ ಪ್ರತಿಭಟನೆಯನ್ನು ನಿಯಂತ್ರಿಸಲು ನಿಯೋಜಿತ ಅರೆ ಮಿಲಿಟರಿ ಪಡೆಗಳ 15 ಕಂಪನಿಗಳ ಪೈಕಿ 10ನ್ನ್ನು ಹಿಂದೆಗೆದುಕೊಳ್ಳಲು ಕೇಂದ್ರವು ಕಳೆದ ವಾರ ಕೈಗೊಂಡ ನಿರ್ಧಾರವು ಅದರ ಮತ್ತು ಪ.ಬಂಗಾಳ ಸರಕಾರದ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದ ಈ ಹೇಳಿಕೆ ಹೊರಬಿದ್ದಿದೆ.
ಆಂತರಿಕ ಭದ್ರತೆ ಮತ್ತು ಸಮೀಪದ ಸ್ಥಳಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್)ಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಪಡೆಗಳ ಅಗತ್ಯವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಗೃಹ ಸಚಿವಾಲಯವು ರಾಜ್ಯಗಳಿಗೆ ಸೂಚಿಸಿದೆ.
ಸಿಎಪಿಎಫ್‌ಗಳ ನಿಯೋಜನೆಯು ತುರ್ತು ಸಂದರ್ಭಗಳಲ್ಲಿ ರಾಜ್ಯಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ರಕ್ಷಣೆಗೆ ಸಂಬಂಧಿಸಿರುವುದರಿಂದ ಅವು ರಾಜ್ಯ ಪೊಲೀಸರಿಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.







