ನ.2 ರಂದು ಸಾರಿಗೆ ನೌಕರರಿಂದ ಧರಣಿ
ಹೊಸ ಸೇವಾ ನಿಯಮಾವಳಿ ಜಾರಿಗೆ ಆಗ್ರಹಿಸಿ, ಅವೈಜ್ಞಾನಿಕ ವರ್ಗಾವಣೆ ಖಂಡಿಸಿ
ಬೆಂಗಳೂರು, ಅ.20: ಅಸ್ಪಷ್ಟ ಬಿಎಂಟಿಸಿ ನೌಕರರ ವರ್ಗಾವಣೆ ಖಂಡಿಸಿ, ಹೊಸ ಸೇವಾ ನಿಯಮಾವಳಿಗಳು ರೂಪಿಸಬೇಕು ಹಾಗೂ ನೌಕರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಫೆಡರೇಷನ್ ನೇತೃತ್ವದಲ್ಲಿ ನ.2 ರಿಂದ ಧರಣಿ ನಡೆಸಲು ನಿರ್ಧರಿಸಲಾಗಿದೆ.
ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮಕ್ಕಳ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ವರ್ಗಾವಣೆ ನೀಡಬೇಕು, ಬಿಎಂಟಿಸಿಯಲ್ಲಿ ಕೂಡಲೇ ನೇಮಕಾತಿ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಸರಕಾರ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ನೌಕರರ ವರ್ಗಾವಣೆ ಘೋಷಣೆ ಮಾಡಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಸಂಘದ ಮುಖಂಡ ಕೆ.ಪ್ರಕಾಶ್ ತಿಳಿಸಿದ್ದಾರೆ.
ಹಿಂದಿನ ವರ್ಷ ಮುಷ್ಕರದ ವೇಳೆ 50 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ವೇತನ ಬಿಟ್ಟರೆ ಬೇರೆ ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ. ಅಲ್ಲದೆ, ಅವೈಜ್ಞಾನಿಕ ಸೇವಾ ನಿಯಮಾವಳಿಯಿಂದ ನೌಕರರಿಗೆ ಸಿಗಬೇಕಾದ ಹಲವು ಭತ್ತೆಗಳು ಸಿಗುತ್ತಿಲ್ಲ ಎಂದ ಅವರು, ಮೋಟಾರ್ ವಾಹನ ಕಾಯ್ದೆ ಪ್ರಕಾರ 8 ಗಂಟೆ ಕೆಲ ಮಾಡಬೇಕು ಎಂದು ಹೇಳುತ್ತಿದೆ. ಆದರೆ, ಸಾರಿಗೆ ನೌಕರರು ಅಧಿಕ ಸಮಯ ಕೆಲಸ ಮಾಡಿದರೂ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಹಣ ನೀಡುತ್ತಿಲ್ಲ. ಹೀಗಾಗಿ, ಹೊಸ ಸೇವಾ ನಿಯಮಾವಳಿಗಳು ರೂಪಿಸಬೇಕು. ಜೊತೆಗೆ, ನೌಕರರ ವೆುೀಲಿನ ಕಿರುಕುಳ ತಡೆಯಲು ಕ್ರಮ ಕೈಗೊಳ್ಳಬೇಕು. ಬಸ್ ಡಿಪೋಗಳಲ್ಲಿ ಪ್ರತಿ ತಿಂಗಳು ನೌಕರರ ಕುಂದುಕೊರತೆಗಳ ಸಭೆ ಮಾಡಬೇಕು. ಟಿಕೆಟ್ ರಹಿತ ಪ್ರಯಾಣದ ವೇಳೆ ಅನಗತ್ಯವಾಗಿ ನೌಕರರನ್ನು ವಜಾ ಮಾಡುವುದು ನಿಲ್ಲಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದ್ದು, ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾದರೆ ಮಾತ್ರ ಧರಣಿ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ಧರಣಿ ಮುಂದುವರಿಸಲಾಗುತ್ತದೆ ಎಂದು ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.







