ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನ ಕೊಲೆ
ಬೆಂಗಳೂರು, ಅ.20: ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಜಿ ಹಳ್ಳಿಯ ಭಾರತ್ ಮಾತಾ ಲೇಔಟ್‌ನ ಸೈಯ್ಯದ್ ಯೂಸುಫ್(25) ಕೊಲೆಯಾಗಿರುವ ಬೈಕ್ ಸವಾರ ಎಂದು ಪೊಲೀಸರು ಗುರುತಿಸಿದ್ದು, ಪ್ರಕರಣ ಸಂಬಂಧ ರೌಡಿಶೀಟರ್ ನದೀಮ್ ಎಂಬಾತನನ್ನು ಬಂಧಿಸಲಾಗಿದೆ.
ಘಟನೆ ವಿವರ: ಸೈಯ್ಯದ್ ಯೂಸುಫ್ ಅಂಗಡಿಯೊಂದನ್ನು ನಡೆಸುತ್ತಿದ್ದ ಅಣ್ಣ ಸೈಯದ್ ಹುಸೈನ್ ಗುರುವಾರ ಜೊತೆ ರಾತ್ರಿ 8ರ ವೇಳೆ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ರೌಡಿಶೀಟರ್ ನದೀಮ್‌ನ ಆಟೊಗೆ ಆಯತಪ್ಪಿ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಆಟೊ ನಿಲ್ಲಿಸಿ ಜಗಳ ತೆಗೆದ ನದೀಮ್ ಇಬ್ಬರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಹುಸೈನ್, ನದೀಮ್‌ನ ತಲೆಗೆ ಹೊಡೆದಿದ್ದು, ಇದರಿಂದ ಕೋಪಗೊಂಡ ಆತ ಆಟೋದಲ್ಲಿದ್ದ ಮಾರಕಾಸ್ತ್ರಗಳಿಂದ ಸೈಯ್ಯದ್ ಯೂಸುಫ್ ಹೊಟ್ಟೆ ತಲೆಗೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯೂಸುಫ್‌ನನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತಲೆ ಮತ್ತು ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಮೃತಪಟ್ಟಿದ್ದಾನೆ. ತಲೆಗೆ ಗಾಯಗೊಂಡಿರುವ ರೌಡಿಶೀಟರ್ ನದೀಮ್ ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







