ಆಕ್ಸ್‌ಫರ್ಡ್ ಕಾಲೇಜ್‌ನಿಂದ ಸೂ ಕಿ ಹೆಸರು ತೆಗೆಯಲು ವಿದ್ಯಾರ್ಥಿಗಳ ನಿರ್ಣಯ

ಲಂಡನ್, ಅ. 20: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಗಂಭೀರ ಮಾನವಹಕ್ಕು ಉಲ್ಲಂಘನೆಗಳನ್ನು ಖಂಡಿಸಲು ವಿಫಲವಾಗಿರುವುದಕ್ಕಾಗಿ, ಇಲ್ಲಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಜೂನಿಯರ್ ಕಾಮನ್ ರೂಮ್‌ನ ಹೆಸರಿನಿಂದ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಹೆಸರನ್ನು ತೆಗೆದುಹಾಕುವ ನಿರ್ಣಯದ ಪರವಾಗಿ ಮತಹಾಕಿದ್ದಾರೆ.
ಇದೇ ಕಾಲೇಜ್‌ನಲ್ಲಿ ಸೂ ಕಿ ಕಲಿತಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜೂನಿಯರ್ ಕಾಮನ್ ರೂಮ್‌ನಿಂದ ತೆಗೆದುಹಾಕುವ ನಿರ್ಣಯಕ್ಕೆ ಸೇಂಟ್ ಹ್ಯೂ ಕಾಲೇಜ್‌ನ ವಿದ್ಯಾರ್ಥಿಗಳು ಗುರುವಾರ ಮತ ಹಾಕಿದರು.
‘‘ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆಗಳು, ಸಾಮೂಹಿಕ ಅತ್ಯಾಚಾರಗಳು ಮತ್ತು ತೀವ್ರ ಮಾನವ ಹಕ್ಕು ಉಲ್ಲಂಘನೆಗಳನ್ನು ಖಂಡಿಸಲು ಸೂ ಕಿ ವಿಫಲವಾಗಿರುವುದು ಅಕ್ಷಮ್ಯ ಮತ್ತು ಅಸ್ವೀಕಾರಾರ್ಹ. ತಾನು ಒಂದು ಕಾಲದಲ್ಲಿ ಪ್ರತಿಪಾದಿಸಿದ್ದ ತತ್ವಗಳು ಮತ್ತು ಆದರ್ಶಗಳ ವಿರುದ್ಧವೇ ಅವರು ಹೋಗುತ್ತಿದ್ದಾರೆ’’ ಎಂದು ಕಾಲೇಜ್‌ನ ನಿರ್ಣಯ ಹೇಳಿದೆ.





