ಶಿವ ಸಂಸ್ಕೃತಿಯ ಮೇಲೆ ಆರ್ಯರ ದಾಳಿ: ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಮೈಸೂರಿನಲ್ಲಿ 'ಬಲಿಚಕ್ರವರ್ತಿ ಸ್ಮರಣೋತ್ಸವ'

ಮೈಸೂರು, ಅ.20: ಆರ್ಯರು ಮೊದಲು ದಾಳಿ ಮಾಡಿದ್ದು ಶಿವ ಸಂಸ್ಕೃತಿಯ ಮೇಲೆ. ಶಿವ ಪರಂಪರೆಯನ್ನು ದಮನ ಮಾಡುವುದು ಅವರ ಗುರಿಯಾಗಿತ್ತು. ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ನಾಯಕತ್ವವನ್ನು ನಾಶ ಮಾಡಿ ಏಕ ಧರ್ಮ, ಏಕ ಸಂಸ್ಕೃತಿ ಮತ್ತು ಏಕ ಧರ್ಮವನ್ನು ಕಟ್ಟುವ ಕೆಲಸವನ್ನು ಸನಾತನರು ಪ್ರಾಚೀನ ಕಾಲದಿಂದಲೇ ಮಾಡುತ್ತಾ ಬಂದಿದ್ದಾರೆ. ಈ ದೇಶದ ಮೂಲಚರಿತ್ರೆ, ವಸ್ತುಸ್ಥಿತಿಯನ್ನು ಮರೆಮಾಚಿ ಏಕ ಸಂಸ್ಕೃತಿ, ಏಕ ಧರ್ಮ ಹೇರುವ ತಂತ್ರಗಾರಿಕೆ ಈ ದೇಶದಲ್ಲಿ ನಡೆಯತ್ತಾ ಬಂದಿದೆ. ಈ ತಂತ್ರವನ್ನು ವಿಫಲಗೊಳಿಸಿ ನಮ್ಮ ಮೂಲ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದಿನ ದಿನಗಳಲ್ಲಿ ನಡೆಯಬೇಕು ಎಂದು ಬೆಂಗಳೂರು ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲಸ್ವಾಮೀಜಿ ಕರೆ ನೀಡಿದ್ದಾರೆ.
ಭಾರತ ಮೂಲನಿವಾಸಿಗಳ ಸಂಸ್ಕೃತಿ, ಸಾಹಿತ್ಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾವಣ, ಮಹಿಷಾಸುರ ಅಥವಾ ಬಲಿ ಚಕ್ರವರ್ತಿಯೇ ಆಗಲಿ ಅವರು ಅವರವರ ಸಮುದಾಯಗಳಿಗೆ ಮಹಾನ್ ನಾಯಕರಾಗಿದ್ದರು. ಅವರು ಎಂದೂ ಪ್ರಜಾಪೀಡಕರಾಗಿರಲಿಲ್ಲ. ಅವರು ವೈದಿಕರನ್ನು ವಿರೋಧಿಸುತ್ತಿದ್ದರು. ಹಾಗಾಗಿ ಅವರನ್ನು ರಾಕ್ಷಸರು ಎಂದು ಅವರನ್ನು ಚಿತ್ರಿಸಲಾಗಿದೆ ಎಂದ ಸ್ವಾಮೀಜಿ, ಈ ನಾಡಿನಲ್ಲಿ ಬುದ್ಧ, ಬಸವಣ್ಣ ಅಂತಹ ಮಹಾನುಭಾವರ ಪರಂಪರೆಯನ್ನು ಕಂಡುಕೊಳ್ಳುವ ಸಮಾಜವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಬಹುಜನರ ಸಂಸ್ಕೃತಿಯನ್ನು ಏಕಸಂಸ್ಕೃತಿಗೆ ಬಲವಂತವಾಗಿ ಹೇರುವ ಕೆಲಸ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ, ಸಂವಿಧಾನ ಆಶಯಕ್ಕೆ ಕೊಡಲಿ ಪೆಟ್ಟು ಕೊಟ್ಟಂತೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು.
ಇದಕ್ಕೂ ಮೊದಲು ನಗರದ ಅರಮನೆ ಬಳಿಯ ಕೋಟೆ ಮಾರಮ್ಮನ ದೇವಾಲಯದಿಂದ ಹೊರಟ ಮೆರವಣಿಗೆಗೆ ಸಂಸ್ಥೆಯ ಅಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿಗಳು ಚಾಲನೆ ನೀಡಿದರು.
ಈ ವೇಳೆ ಬಲಿಚಕ್ರವರ್ತಿ, ಬುದ್ಧ ಸೇರಿದಂತೆ ವಿವಿಧ ವೇಷಧಾರಿಗಳು ಮತ್ತು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವು. ಮೆರವಣಿಗೆಯಲ್ಲಿ ಜೈಕಾರ ಹಾಕಿ ದಾರಿಯುದ್ದಕ್ಕೂ ಬಲಿ ಚಕ್ರವರ್ತಿಯ ಮಹತ್ವವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿದರು. ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಪುರುಷೋತ್ತಮ್, ನಾಗರಾಜು ತಲಕಾಡು, ವಕೀಲ ಎಚ್.ಎಸ್.ಮೋಹನ್‌ಕುಮಾರ್, ಡಾ.ವಿ.ಷಣ್ಮುಗಂ, ಡಾ.ಎಸ್.ನರೇಂದ್ರಕುಮಾರ್, ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
'ದಲಿತರು-ಮುಸ್ಲಿಮರು ಒಂದಾಗಬೇಕು'
ವೈದಿಕಶಾಹಿಗಳು ಸಂಚು ರೂಪಿಸಿ, ನೈಜ ಇತಿಹಾಸವನ್ನು ಮರೆಮಾಚಿ ಸುಳ್ಳು ಇತಿಹಾಸವನ್ನು ಸೃಷ್ಟಿ ಮಾಡಿ ಮೂಲ ನಿವಾಸಿಗಳನ್ನು ಗುಲಾಮಗಿರಿಗೆ ಒಳಪಡಿಸುವ ಯತ್ನವನ್ನು ನಿರಂತರವಾಗಿ ಮಾಡುತ್ತಿವೆ. ಪುರಾಣಗಳಲ್ಲಿನ ಬ್ರಾಹ್ಮಣರ ಮೇಲು ಕೀಲು ಭಾವನೆಗಳನ್ನು ಅವೈದಿಕ ಶಾಹಿಗಳು ದಿಕ್ಕರಿಸಬೇಕು, ಮೂಲಭೂತವಾದಿಗಳು, ಮನುವಾದಿಗಳು ಇದೇ ರೀತಿ ದೇಶವನ್ನು ಆಳುತ್ತಿದ್ದರೆ ಸಂವಿಧಾನಕ್ಕೆ ಧಕ್ಕೆ ಉಂಟಾಗಲಿದೆ. ದೇಶದಲ್ಲಿ 25% ಇರುವ ದಲಿತರು 15% ಇರುವ ಮುಸ್ಲಿಮರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸವಾಗಬೇಕು ಜೊತೆಗೆ ಹಿಂದುಳಿದ ವರ್ಗಗಗಳನ್ನು ಸೇರಿಸಿಕೊಂಡರೆ ದೇಶದ ಆಡಳಿತ ಚುಕ್ಕಾಣಿಯನ್ನು ಸುಲಭವಾಗಿ ಹಿಡಿಯಬಹುದು.
-ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರಾಧ್ಯಾಪಕರು
'ಶಿವಭಕ್ತರೆಲ್ಲರೂ ಹಿಂದೂಗಳಲ್ಲ'
ದೇಶದಲ್ಲಿರುವ ಶಿವಭಕ್ತರೆಲ್ಲರೂ ಹಿಂದೂಗಳಲ್ಲ, ಸನಾತನ ಧರ್ಮವನ್ನು ವಿರೋಧಿಸುವವರು ಶಿವನನ್ನು ಪೂಜಿಸುತ್ತಾರೆ ಹಾಗೆಂದ ಮಾತ್ರಕ್ಕೆ ಎಲ್ಲರೂ ಹಿಂದೂಗಳಾಗಲು ಸಾಧ್ಯವಿಲ್ಲ. ಇತ್ತೀಚೆಗೆ ಉಡುಪಿ ಪೇಜಾವರ ಶ್ರೀಗಳು ಈ ದೇಶದಲ್ಲಿರುವ ಶಿವಭಕ್ತರೆಲ್ಲರೂ ಹಿಂದೂಗಳು ಎಂದು ಹೇಳಿದ್ದಾರೆ. ಆದರೆ ಇದು ನ್ಯಾಯದ ವಿಚಾರವಲ್ಲ. ಭಾರತದಲ್ಲಿ ಅತ್ಯಧಿಕ ಅನುಯಾಯಿಗಳು ಇರುವುದು ಶಿವನಿಗೆ, ವೈಷ್ಣವ ಪರಂಪರೆ ಪಾಲಿಸುವ 9 ಕೋಮುಗಳು ಇದ್ದರೆ, ಶಿವ ಪರಂಪರೆಯನ್ನು ಪಾಲಿಸುವ 18 ಕೋಮುಗಳಿವೆ. ಶಿವ ಆದಿವಾಸಿಗಳ ಮಹಾ ನಾಯಕ, ರಾಮ, ಕೃಷ್ಣ ಎಲ್ಲರೂ ಶಿವಭಕ್ತರು, ಶಿವ ಸಂಸ್ಕೃತಿ ಅತ್ಯಂತ ಪ್ರಾಚೀನವಾದದ್ದು.- ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ







