ಶಿಕಾರಿಪುರ: ಪುರಸಭೆಯ ಮುಖ್ಯಾಧಿಕಾರಿಯನ್ನು ಎಸಿಬಿ ತನಿಖೆಗೆ ಒಳಪಡಿಸುವಂತೆ ಆಗ್ರಹ

ಶಿಕಾರಿಪುರ, ಅ.20: ಭ್ರಷ್ಟಾಚಾರದ ಆರೋಪದಲ್ಲಿ ಸೇವೆಯಿಂದ ಅಮಾನತುಗೊಂಡಿರುವ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಬಾಲಾಜಿರಾವ್ ಅವರನ್ನು ಎಸಿಬಿಗೆ ಒಳಪಡಿಸಿ ಅವರ ಸೇವಾವಧಿಯಲ್ಲಿ ನಡೆದ ಟೆಂಡರ್ ಕಾಮಗಾರಿ ಸಹಿತ ಹಲವು ಪ್ರಮುಖ ನಿರ್ಣಯದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವನ್ನು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕೃಷ್ಣ ಹುಲಗಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ ಸಮುದಾಯ ಸಂಘಟನಾಧಿಕಾರಿ ಹುದ್ದೆಯಲ್ಲಿದ್ದ ಬಾಲಾಜಿರಾವ್ ಕೇವಲ ಪ್ರಭಾವದಿಂದ ಇಲ್ಲಿನ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಭಡ್ತಿ ಹೊಂದಿ ನೇಮಕಗೊಂಡು ಪುರಸಭೆಯನ್ನು ಭ್ರಷ್ಟಾಚಾರದ ಕೇಂದ್ರವಾಗಿಸಿದ ಕುಖ್ಯಾತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಿದರು.
ಪುರಸಭೆಯಲ್ಲಿ ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ, ಕರ್ತವ್ಯ ಲೋಪ, ಪಂಪ್ ಹೌಸ್ ಮತ್ತಿತರ ಪುರಸಭೆಗೆ ಸಂಬಂದಿಸಿದ ಕಟ್ಟಡಗಳಲ್ಲಿ ಪಾರ್ಟಿ ಮೋಜು ಮಸ್ತಿಗಳನ್ನು ನಡೆಸಿ ಜಿಲ್ಲೆಯಲ್ಲಿ ಅತಿಹೆಚ್ಚು ದೂರುಗಳನ್ನು ಹೊಂದಿದ ಮುಖ್ಯಾಧಿಕಾರಿ ಎಂದು ಪ್ರಸಿದ್ಧವಾಗಿದ್ದರು ಎಂದ ಅವರು, ಮಾಜಿ ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆ ತಗ್ಗಿಸುವ ರೀತಿಯಲ್ಲಿ ವರ್ತಿಸಿದ್ದಾರೆ. ಆರಂಭದಿಂದಲೂ ದೂರುಗಳು ಸಾಮಾನ್ಯವಾಗಿದ್ದರೂ ಕ್ಷೇತ್ರದ ಶಾಸಕರ ನಿರ್ಲಕ್ಷ್ಯದಿಂದ ಅವ್ಯವಹಾರ ಭ್ರಷ್ಟಾಚಾರ ಅಧಿಕವಾಗಿದ್ದು, ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.
ಕೆಎಂಎಎಸ್ ಗ್ರೇಡ್ ಅಧಿಕಾರಿಗಳನ್ನು ಮಾತ್ರ ಪುರಸಭೆಗೆ ಮುಖ್ಯಾಧಿಕಾರಿಯಾಗಿ ನೇಮಕಗೊಳಿಸುವಂತೆ ಒತ್ತಾಯಿಸಿದ ಅವರು, ಪುರಸಭೆಯಲ್ಲಿನ ಇದುವರೆಗಿನ ಅವ್ಯವಹಾರ, ಭ್ರಷ್ಟಾಚಾರದ ಸಮಗ್ರ ತನಿಖೆಯನ್ನು ಎಸಿಬಿಗೆ ವಹಿಸಿ ಪಾರದರ್ಶಕತೆ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಕೋರಿ, ಶಿವಯ್ಯ ಶಾಸ್ತ್ರಿ, ಮಾದೇಗೌಡ್ರು ಮತ್ತಿತರರು ಉಪಸ್ಥಿತರಿದ್ದರು.







